

ಬೇಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ, ಅಂಗನವಾಡಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಸವೇಶ್ವರ ವೃತ್ತದ ಮೂಲಕ ಹರ್ಡೀಕರ್ ವೃತ್ತಕ್ಕೆ ತೆರಳಿ ಧರಣಿ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಸಿಯೂಟ, ಅಂಗನವಾಡಿ ನೌಕರರು ಹಾಗೂ ಸಿಬ್ಬಂದಿಗೆ ಸಮಪರ್ಕ ವೇತನ, ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗುತ್ತಿಲ್ಲ. ಕೇವಲ ಭರವಸೆ ಮೂಲಕವೇ ನಮ್ಮಿಂದ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಶೀಘ್ರ ಅಂಗನವಾಡಿ ಮತ್ತು ಬಿಸಿಯೂಟ ನೌಕರಿಗೆ ಸವಲತ್ತುಗಳನ್ನು ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕು ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ನೌಕರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಮುಖ್ಯ ಅಡುಗೆದಾರರಿಗೆ ಮಾಸಿಕ ಕನಿಷ್ಠ ವೇತನ ನೀಡಿ ಇತರೆ ನೌಕರರಿಗೆ ಶೋಷಣೆ ಮಾಡುತ್ತಿದೆ. ಬಿಸಿಯೂಟ ಸಿಬ್ಬಂದಿ ಮೃತಪಟ್ಟರೂ ಕುಟುಂಬಕ್ಕೆ ಪರಿಹಾರವಿಲ್ಲ. ಭದ್ರತೆ ಇಲ್ಲದೆ ಕೆಲಸ ಮಾಡುತಿದ್ದಾರೆ. ಸರ್ಕಾರ ಸಬೂಬು ಹೇಳುವ ಬದಲು ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಾಮಾಕ್ಷಿ ರಾಜು ಮಾತನಾಡಿ, ಇತ್ತೀಚಿನ ದಿನದಲ್ಲಿ ಅಂಗನವಾಡಿ ಶಿಕ್ಷಕಿಯರು ಸರ್ಕಾರದ ಹತ್ತಾರು ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಕನಿಷ್ಠ ವೇತನ, ಸೂಕ್ತ ಭದ್ರತೆ ಇಲ್ಲವಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.
ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಈರಯ್ಯ, ಕಾರ್ಯದರ್ಶಿ ನಂದೀಶ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಮಂಜುಳಾ, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ನೇತ್ರಾ, ಮುಖಂಡರಾದ ಸೌಭಾಗ್ಯಾ, ಅಂಥೋಣಿ, ರವಿ, ಪ್ರದೀಪ್, ಲಕ್ಕಮ್ಮ, ಆಶೋಕ್ ಸೇರಿದಂತೆ ಇತರರಿದ್ದರು.