

ವಾಡಿ: ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡುವಂತೆ ಕೇಳಿದ ಸಫಾಯಿ ಕರ್ಮಚಾರಿಗಳನ್ನು ಗುತ್ತಿಗೆದಾರ ಕೆಲಸದಿಂದ ತೆಗೆದು ಹಾಕಿದ ಪ್ರಸಂಗ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ನಿಲ್ದಾಣದಲ್ಲಿ ಸುಮಾರು ಏಳು ವರ್ಷಗಳಿಂದ 25 ಕಾರ್ಮಿಕರು ಸಫಾಯಿ ಕರ್ಮಚಾರಿಗಳಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಪಿಎಫ್, ಇಎಸ್‌ಐ ಸಹಿತ 11-13 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ತಿಂಗಳ ಹಿಂದೆ ತ್ರಿಸ್ಟಾರ್ ಫೆಸಿಲಿಟಿ ಮ್ಯಾನೇಜಮೆಂಟ್ ಪ್ರೆÊ ಲಿಮಿಟೆಡ್ ಎಂಬ ಕಂಪನಿ ನಿಲ್ದಾಣದ ನಿರ್ವಹಣೆ ಹೊಣೆ ಹೊತ್ತಿದ್ದು, ಅರ್ಧದಷ್ಟು ಸಂಬಳ ಕಡಿತ ಮಾಡಿದೆ. ಕೇವಲ 6-7 ಸಾವಿರ ರೂ. ನೀಡುತ್ತಿದೆ. ಪೊಲೀಸ್ ವೆರಿಫಿಕೇಷನ್ ಎಂದು ಹೇಳಿ ಇನ್ನು 2 ಸಾವಿರ ರೂ. ಪಡೆದಿದೆ. ಈ ಬಗ್ಗೆ ಕೇಳಿದ್ದಕ್ಕೆ ಕೆಲಸದಿಂದ ತೆಗೆದುಹಾಕಿದೆ ಎಂದು ಕಾರ್ಮಿಕರು ದೂರಿದರು.
ತ್ರಿಸ್ಟಾರ್ ಫೆಸಿಲಿಟಿ ಮ್ಯಾನೇಜಮೆಂಟ್ ಕಂಪನಿ ಸರ್ಕಾರ ನಿರ್ಧರಿಸಿದ ಕನಿಷ್ಠ ವೇತನ ನೀಡುತ್ತಿಲ್ಲ. ಸುಮಾರು ಏಳು ವರ್ಷಗಳಿಂದ ಕೆಲಸ ಮಾಡುತ್ತಿರುವ 25 ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಬೇಕು. ಯಾವುದೇ ಗುತ್ತಿಗೆದಾರ ಬಂದರೂ ಈ ಕಾರ್ಮಿಕರನ್ನೇ ಮುಂದುವರಿಸಬೇಕು ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರಾವಣ ಮೋಸಲಗಿ ಆಗ್ರಹಿಸಿದರು.
ಕರ್ಮಚಾರಿಗಳನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸ್ಟೇಷನ್ ಮಾಸ್ಟರ್ ಜತೆ ಮಾತುಕತೆ ನಡೆಸಲಾಗಿದೆ. ಆದರೆ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಕಂಪನಿ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ರೈಲ್ವೆ ಹೊರ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಚಿಂತಪಳ್ಳಿ, ದಲಿತ ಸೇನೆ ತಾಲೂಕು ಅಧ್ಯಕ್ಷ ರಘುವೀರ ಪವಾರ್ ಇತರರಿದ್ದರು.