

ಶಿವಮೊಗ್ಗ: ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಬೆಳೆಗಳಿಗೆ ಘೊಷಿಸಿರುವ ಕನಿಷ್ಠ ಬೆಂಬಲ ಬೆಲೆ ಅವೈಜ್ಞಾನಿಕವಾಗಿದ್ದು, ಸ್ವಾಮಿನಾಥನ್ ವರದಿ ಅನ್ವಯ ಬೆಲೆ ನಿಗದಿಪಡಿಸಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಘೊಷಣೆ ಮಾಡಿರುವ ಬೆಂಬಲ ಬೆಲೆ ಶೇ.50ರಿಂದ 83ರಷ್ಟು ಹೆಚ್ಚಿನ ಲಾಭ ನೀಡುತ್ತದೆ ಎಂಬ ಸರ್ಕಾರದ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಭತ್ತಕ್ಕೆ ಶೇ.2.92 ಹಾಗೂ ರಾಗಿಗೆ ಶೇ.4.60ರಷ್ಟು ಹೆಚ್ಚು ಲಾಭವಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರವೇ ನೇಮಿಸಿದ್ದ ಕೃಷಿ ಬೆಲೆ ಆಯೋಗದ ಶಿಫಾರಸಿಗಿಂತಲೂ ಕಡಿಮೆ ಬೆಂಬಲ ಬೆಲೆ ಘೊಷಿಸಲಾಗಿದೆ. ವರ್ಷದಲ್ಲಿ ರಾಜ್ಯದ ರೈತರು 13 ಬೆಳೆಗಳನ್ನು 21,469 ಕೋಟಿ ರೂ. ನಷ್ಟಕ್ಕೆ ಮಾರಾಟ ಮಾಡಿದ್ದಾರೆ. ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಪ್ರಕಾರ ಕೃಷಿ ಉತ್ಪನ್ನಗಳಿಗೆ ಧಾರಣೆ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೊಷಿಸಿತ್ತು. ಆದರೆ ಅದನ್ನು ಅನುಷ್ಠಾನ ಮಾಡಿಲ್ಲ ಎಂದರು.
ಪೌಷ್ಟಿಕಾಂಶಯುಕ್ತ ಮೆಕ್ಕೆಜೋಳವನ್ನು ಪಡಿತರದಲ್ಲಿ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂಬ ನೆಪ ನೀಡಿ 6 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಮೂಲಕ ಖರೀದಿ ಮಾಡಿಲ್ಲ. ಹೀಗಾಗಿ ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ 2022ಕ್ಕೆ ರೈತರ ಆದಾಯ ದ್ವಿಗುಣವಾಗುವುದು ಹೇಗೆ? ಎಂದು ಪ್ರಶ್ನಿಸಿದರು.
ಎಪಿಎಂಸಿ ಕಾಯ್ದೆ ಮಾರಕ: ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಕಲ್ಪಿಸಿದೆ. ಬೃಹತ್ ಕಂಪನಿಗಳು ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವ ಅಪಾಯವಿದೆ ಎಂದು ಎಚ್.ಆರ್.ಬಸವರಾಜಪ್ಪ ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಆಕ್ಷೇಪ: 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಖಾಸಗಿ ವಿದ್ಯುತ್ ಕಂಪನಿಗಳ ಹಿತಾಸಕ್ತಿಗೆ ಪೂರಕವಾದ ತಿದ್ದುಪಡಿಯಿಂದ ಹಾಲಿ ವಿದ್ಯುತ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ನೌಕರರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲ ಉಪಾಧ್ಯಕ್ಷ ಪಿ.ಶೇಖರಪ್ಪ, ಪ್ರಮುಖರಾದ ಕೆ.ರಾಘವೇಂದ್ರ, ಟಿ.ಎಂ.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.