ಕನಿಷ್ಠ ಕೂಲಿ ಆದೇಶ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Published on

ಚಾಮರಾಜನಗರ: ವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ಜಾರಿಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ನೌಕರರಿಗೆ ಜಾರಿಗೊಳಿಸಿರುವ ಅವೈಜ್ಞಾನಿಕ ಕನಿಷ್ಠ ವೇತನವನ್ನು ನ್ಯಾಯಾಲಯ ಪ್ರಶ್ನೆ ಮಾಡಿತ್ತು. 2024 ಡಿ.13 ರಲ್ಲಿ ಹೈಕೋರ್ಟ್ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಕನಿಷ್ಠ ವೇತನ ನಿಗದಿಪಡಿಸಲು 10 ವಾರಗಳ ಗಡುವು ನೀಡಿತ್ತು. ಮೂರು ವರ್ಷಗಳು ಕಳೆದ ಬಳಿಕ 2021ರ ಕನಿಷ್ಠ ವೇತನದ ಅಧಿಸೂಚನೆ ರದ್ದು ಮಾಡಿದೆ. ಅದರಂತೆ 2025 ಏ.11 ರಂದು ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ನೌಕರರ ವೈಜ್ಞಾನಿಕ ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ಕರವಸೂಲಿಗಾರ, ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಅತಿ ಕುಶಲರಾಗಿ ಪರಿಗಣಿಸಿ 38,021 ರೂ, ಮೂಲ ವೇತನವನ್ನು ನಿಗದಿಪಡಿಸಬೇಕು. ವಾಟರ್ ಮ್ಯಾನ್(ನೀರುಗಂಟಿ), ಪಂಪ್ ಆಪರೇಟರ್ , ಮೆಕ್ಯಾನಿಕಲ್ ಹುದ್ದೆಗಳಿಗೆ 33,062 ರೂ, ಮೂಲ ವೇತನವನ್ನು ನಿಗದಿಪಡಿಸಬೇಕು. ಅಟೆಂಡರ್ ಅಥವಾ ಜವಾನರಿಗೆ 28,750 ರೂ. ಮೂಲ ವೇತನವನ್ನು ನಿಗದಿಪಡಿಸಬೇಕು. ಸ್ವಚ್ಛತಾಗಾರರಿಗೆ 25,000 ರೂ. ಮೂಲ ವೇತನವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಸಿಬ್ಬಂದಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ ಮೂಲ ವೇತನಕ್ಕೆ ಶೇ.2 ರಷ್ಟು ಹೆಚ್ಚಳವನ್ನು ಪ್ರತಿವರ್ಷ ಪರಿಗಣಿಸಬೇಕು. ಹೆಚ್ಚುವರಿ ಭತ್ಯೆಯನ್ನು ನೀಡಬೇಕು. ಈ ಕನಿಷ್ಠ ವೇತನವನ್ನು ಆದಷ್ಟು ಬೇಗ ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು ಬರಗಿ, ಪ್ರಧಾನ ಕಾರ್ಯದರ್ಶಿ ಅಮ್ಮನಪುರ ಸುರೇಶ್, ಖಜಾಂಚಿ ದೊರೆಸ್ವಾಮಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಸಿದ್ದರಾಜು, ಯಳಂದೂರು ತಾಲೂಕು ಅಧ್ಯಕ್ಷ ಕೃಷ್ಣನಾಯಕ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರಾಜಣ್ಣ, ಚಾಮರಾಜನಗರ ತಾಲೂಕು ಅಧ್ಯಕ್ಷ ಕೃಷ್ಣ ಹಾಗೂ ನೌಕರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net