ಕನಿಷ್ಠ 7.5 ಸಾವಿರ ಪಿಂಚಣಿಗೆ ಆಗ್ರಹ

Manavi
Published on

ಚಿತ್ರದುರ್ಗ: ಮಾಸಿಕ ಕನಿಷ್ಠ 7.5 ಸಾವಿರ ಪಿಂಚಣಿ ಜತೆಗೆ ಡಿಎ ಸೌಲಭ್ಯ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ರಾಷ್ಟ್ರೀಯ ಆಂದೋಲನಾ ಸಮಿತಿ, ನಿವೃತ್ತ ಪಿಂಚಣಿದಾರರ ಸಂಘದ ಕಾರ್ಯಕರ್ತರು ಗುರುವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ, ಪಿಂಚಣಿದಾರರ ನ್ಯಾಯಯುತ ಹಕ್ಕಿಗಾಗಿ ಹೋರಾಟ ಆರಂಭಿಸಿ ದಶಕಗಳೇ ಕಳೆದರೂ ಬೇಡಿಕೆಗಳು ಈಡೇರಿಲ್ಲ ಎಂದು ಸಮಿತಿ ಅಧ್ಯಕ್ಷ ಎ.ಕೆ. ಮಹಾದೇವಪ್ಪ ಅಳಲು ತೋಡಿಕೊಂಡರು.

ಇಳಿ ವಯಸ್ಸಿನಲ್ಲಿ ನೆಲೆ ಕಾಣದೆ, ಕಮರಿ ಹೋಗಿದ್ದೇವೆ. ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರ, ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೌರವಾಧ್ಯಕ್ಷ ಆರ್.ರಾಜಣ್ಣ ತಿಳಿಸಿದರು.

ಕನಿಷ್ಠ ಪಿಂಚಣಿ 7.5 ಸಾವಿರ ರೂ., ಡಿಎ, ವೈದ್ಯಕೀಯ ಸೌಲಭ್ಯ, ವಿಧವೆಯರಿಗೆ ಪೂರ್ಣ ವೇತನ, ಪಿಂಚಣಿ ವಂಚಿತರಿಗೆ ಕನಿಷ್ಠ 5ಸಾವಿರ ರೂ. ಪಿಂಚಣಿ ನೀಡಬೇಕು. ದೇಶಾದ್ಯಂತ 1,700ಕ್ಕೂ ಅಧಿಕ ಪ್ರತಿಷ್ಠಿತ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಕಾರ್ಖಾನೆ, ಕಂಪನಿಗಳಿವೆ. ಲಕ್ಷಾಂತರ ನಿವೃತ್ತ ನೌಕರರಿಗೆ ಇಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬಹುದು. ಅದು ಕೂಡ ನಡೆಯುತ್ತಿಲ್ಲ. ಹೀಗಾಗಿ ಬದುಕೆಂಬುದೇ ಹೋರಾಟವಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಬೇಡಿಕೆ ಈಡೇರಿಸಲು ಮುಂದಾಗಬೇಕೆಂದು ಉಪಾಧ್ಯಕ್ಷ ಎ.ಡಿ.ಗುರುಬಸಪ್ಪ ಕೋರಿದರು.

ಶಂಕರರಾವ್, ಶಿವಾನಂದ, ಶ್ರೀನಿವಾಸ ರೆಡ್ಡಿ, ರಾಮಪ್ರಸನ್ನ, ಗುರುಬಸಪ್ಪ, ಬಸವರಾಜ, ಆಸಿಫ್ ಆಲಿ, ವಾಜಿದ್, ರತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net