

ಸಾಗರ: ಅಡಕೆ ತೋಟಗಳಿಗೆ ಕೊಳೆ ಔಷಧ ಸಿಂಪಡಿಸಲು ತೋಟಗಾರಿಕೆ ಇಲಾಖೆಯಿಂದ ಒಂದು ಹೆಕ್ಟೇರ್ಗೆ 1200 ರೂ. ಸಹಾಯಧನ ನೀಡಲಾಗುತ್ತಿದೆ. ಆದರೆ ಬೆಳೆಗಾರರಿಗೆ ಹೆಕ್ಟೇರ್ಗೆ ಒಂದು ಬಾರಿ ಔಷಧ ಸಿಂಪಡಿಸಲು 20 ಸಾವಿರ ರೂ. ಖರ್ಚು ಬರುತ್ತಿದೆ. ತಾಲೂಕಿನ ಕೆಲ ಭಾಗಗಳಲ್ಲಿ 3-4 ಬಾರಿ ಔಷಧ ಸಿಂಪಡಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಕನಿಷ್ಠ 20 ಸಾವಿರ ರೂ. ನೆರವು ನೀಡಬೇಕು ಎಂದು ಒತ್ತಾಯಿಸಿ ಸಿಎಂಗೆ ಪತ್ರ ಬರೆಯುವುದಾಗಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ತಾಪಂ ಅಧಿಕಾರಿಗಳ ತ್ರೖೆಮಾಸಿಕ ಸಭೆಯಲ್ಲಿ ಮಾತನಾಡಿ, ಈ ಬಾರಿ ವಾಡಿಕೆಗಿಂತ ಶೇ.11 ಮಳೆ ಕಡಿಮೆಯಾಗಿದೆ. ಬಿತ್ತನೆ ನಡೆದಿದ್ದು, ಬಿತ್ತನೆಬೀಜ ಹಾಗೂ ಗೊಬ್ಬರ ಸಂಗ್ರಹ ಸಮರ್ಪಕವಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದ ನೆರೆಪರಿಹಾರದ ಹಣ ಇನ್ನೂ ಬಿಡುಗಡೆ ಆಗಿಲ್ಲ. ಕಳೆದ ವರ್ಷ ಜಿಪಂನಿಂದ ರಸ್ತೆ, ಮೋರಿ, ರೈತರ ಬದು, ಹಳ್ಳ, ಶಾಲೆ, ಅಂಗನವಾಡಿ ಕಟ್ಟಡ ಹಾನಿಯಾಗಿರುವುದಕ್ಕೆ 41 ಕೋಟಿ ರೂ. ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ಕಳಿಸಿದ್ದು, ಈತನಕ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಮೊದಲ ಹಂತದಲ್ಲಿ ಶಾಲಾ ಕೊಠಡಿಗಳ ಮರು ನಿರ್ವಣಕ್ಕೆ 3.86 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಆದರೆ ಶಿಕಾರಿಪುರ ಮತ್ತು ಶಿವಮೊಗ್ಗ ತಾಲೂಕಿಗೆ ನೆರೆಹಾನಿ ಪರಿಹಾರ ಪೂರ್ಣ ಬಿಡುಗಡೆಯಾಗಿದ್ದು ಸಾಗರ ತಾಲೂಕಿಗೆ ಮಾತ್ರ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ 34 ಅಂಗನವಾಡಿಗಳ ದುರಸ್ತಿಗೆ 16 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ 146 ಅಂಗನವಾಡಿಗಳ ರಿಪೇರಿಗೆ ಹಣ ಬಿಡುಗಡೆಯಾಗಿಲ್ಲ. ಜತೆಗೆ ಕಳೆದ ಮಳೆಗಾಲದಲ್ಲಿ ಮನೆ ಹಾನಿಯಾದವರಿಗೂ ಹಣ ಬಿಡುಗಡೆಯಾಗಿಲ್ಲ. ಮನೆಹಾನಿ ಸರ್ವೆ ಸಂದರ್ಭದಲ್ಲಿ ‘ಎ’ ಮತ್ತು ಬಿ ಕೆಟಗರಿಗೆ ಸೇರಿಸಬೇಕಾಗಿದ್ದ ಮನೆಯನ್ನು ಸಿ ಕೆಟಗರಿಗೆ ಸೇರಿಸಲಾಗಿದೆ. ಇದರಿಂದ ಪರಿಹಾರ ಹಣ ಕಡಿಮೆ ಬರುವ ಸಾಧ್ಯತೆ ಇದ್ದು, ಮರು ಪರಿಶೀಲಿಸುವ ಅಗತ್ಯವಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದರ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ನಗರವ್ಯಾಪ್ತಿಯ ಕೆಲ ಮದ್ಯದಂಗಡಿಗಳಲ್ಲಿ ಎಂಆರ್ಪಿಗಿಂತ ಹೆಚ್ಚು ಹಣ ಪಡೆಯುತ್ತಿದ್ದು, ಅಂತಹ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಉಪಾಧ್ಯಕ್ಷ ಅಶೋಕ ಬರದವಳ್ಳಿ, ಇಒ ಪುಷ್ಪಾ ಎಂ.ಕಮ್ಮಾರ್ ಇದ್ದರು.
ಕಳೆದ ಬಾರಿ ಮಳೆಯಿಂದ ತಾಲೂಕಿನ ಅಡಕೆ ತೋಟಗಳಿಗೆ ಕೊಳೆರೋಗ ಬಂದಿತ್ತು. ಕೊಳೆರೋಗ ಪರಿಹಾರ ಕೋರಿ 5 ಸಾವಿರ ಜನ ಅರ್ಜಿ ಸಲ್ಲಿಸಿದ್ದು ಈತನಕ ಪರಿಹಾರ ಬಂದಿಲ್ಲ. ಈ ಬಾರಿ ಸಹ ಕೊಳೆ ಬರುವ ಸಾಧ್ಯತೆ ಇದ್ದು, ಹಿಂದಿನ ಸಾಲಿನ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಡಿಸಿಗೆ ಪತ್ರ ಬರೆಯುತ್ತೇನೆ.
| ಮಲ್ಲಿಕಾರ್ಜುನ ಹಕ್ರೆ, ತಾಪಂ ಅಧ್ಯಕ್ಷ