ಚಾಮರಾಜನಗರ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಮಾ.14 ರಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಸರ್ಕಾರ ಆದೇಶಿಸಿದ್ದು, ಅದರಂತೆ ಚಾಮರಾಜನಗರ, ಕೊಳ್ಳೇಗಾಲ, ಹನೂರಿನ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ನೊಂದಾಯಿಸಿಕೊಳ್ಳಲಾಗಿದೆ.
ಎಲ್ಲ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಯೋಜನೆಯಡಿ ನೊಂದಣಿ ಕೇಂದ್ರಗಳಲ್ಲಿ ಈಗಾಗಲೇ ರಾಗಿ ಮಾರಾಟಕ್ಕೆ ನೊಂದಾಯಿಸಿಕೊಂಡಿರುವ ರೈತರು ಸಂಬಂಧಪಟ್ಟ ಖರೀದಿ ಕೇಂದ್ರಗಳಿಗೆ ರಾಗಿಯನ್ನು ನೀಡಬಹುದಾಗಿದೆ. ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಖರೀದಿ ಏಜೆನ್ಸಿಯಾದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಚಾಮರಾಜನಗರ ಶಾಖಾ ವ್ಯವಸ್ಥಾಪಕ ರವಿ (ಮೊ.ಸಂ 9845661618, 9449864455) ಇವರನ್ನು ಸಂಪರ್ಕಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.