ಕನಸುಗಳಿಗೆ ಬೇಲಿ ಹಾಕಿಕೊಳ್ಳಬೇಡಿ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಸಿ ಡಾ.ಕೆ.ವಿ.ರಾಜೇಂದ್ರ ಸಲಹೆ

20
Published on

ಮೈಸೂರು: ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿಗಳೂ ತಮ್ಮ ಕನಸುಗಳಿಗೆ ಒತ್ತಾಸೆಯಾಗಬೇಕೆ ವಿನಹ ಬೇಲಿ ಹಾಕಿಕೊಳ್ಳಬಾರದು. ಉದ್ಯೋಗಕ್ಕಾಗಿ ಈಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಸ್ಪರ್ಧೆ ಏರ್ಪಟ್ಟಿದ್ದು, ಉನ್ನತ ಹುದ್ದೆ ಗಿಟ್ಟಿಸಿಕೊಳ್ಳುವತ್ತ ನಿಮ್ಮ ಗುರಿ ಇರಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ಪಿಡಿಒ, ಎಫ್‌ಡಿಎ, ಎಸ್‌ಡಿಎ, ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರೀಕ್ಷೆ ಎದುರಿಸುವ ಮುನ್ನ ಸ್ಪರ್ಧಾತ್ಮಕ ಪರೀಕ್ಷೆಯ ಆಯಾಮಗಳನ್ನು ಅರಿತುಕೊಳ್ಳಬೇಕು. ಕೇವಲ ಗೈಡ್ ಪುಸ್ತಕಗಳಿಂದ ಸಫಲರಾಗಲು ಸಾಧ್ಯವಿಲ್ಲ. ಪ್ರತಿನಿತ್ಯ ವಿವಿಧ ದಿನಪತ್ರಿಕೆಗಳನ್ನು ಮೂರು ಗಂಟೆಗಳ ಕಾಲ ಓದುವುದರಿಂದ ಪರಿಣಾಮಕಾರಿಯಾಗಿ ಸಹಕಾರಿಯಾಗಲಿದೆ, ದಿನಪತ್ರಿಕೆಗಳಲ್ಲಿ ಪ್ರತಿಯೊಂದು ವಿಷಯಗಳ, ಪ್ರಸ್ತುತ ವಿದ್ಯಮಾನಗಳ ಬಗೆಗೆ ಸವಿಸ್ತಾರವಾದ ವಿವಿರ ಸಿಗುವುದರಿಂದ ಸ್ಪರ್ಧಾತ್ಮಕ ಜಗತ್ತಿಗೆ ತಯಾರಾಗಲು ಉಪಯುಕ್ತವಾಗಲಿದೆ ಎಂದರು.
ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವವರು ಉನ್ನತ ಹುದ್ದೆಗೇರಲು ಆಗುವುದಿಲ್ಲ ಎಂಬ ಮನೋಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಪರೀಕ್ಷೆಯನ್ನು ನಾಳೆಯೇ ಇದೆ ಎಂದು ಭಾವಿಸಿ ಪ್ರತಿನಿತ್ಯ ಶ್ರಮಪಡುವುದರಿಂದ ಯಶಸ್ಸು ಸಿಗಲಿದೆ. ಅಂತರ್ಜಾಲ, ನವ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಿ, ಕಾಲಹರಣ ಮಾಡಬೇಡಿ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಅನೇಕರಿಗೆ ಅವಕಾಶಗಳಿರುವುದಿಲ್ಲ. ಆದರೆ ಕರಾಮುವಿ ನಿಮಗೆಲ್ಲಾ ಉತ್ತಮ ಅವಕಾಶ ಕಲ್ಪಿಸಿದೆ ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಪರೀಕ್ಷಾ ಸಿದ್ಧತೆ ಬಗ್ಗೆ ಮಾತನಾಡಿದ ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಬಿ.ಸುಪ್ರಿಯ ಬಾಣಗಾರ್ ಅವರು, ಸಾಧನೆ ಮಾಡಬೇಕೆಂಬ ಛಲದೊಂದಿಗೆ ಹಲವು ತ್ಯಾಗಕ್ಕೂ ಶಿಬಿರಾರ್ಥಿಗಳು ಸಿದ್ಧರಿರಬೇಕು. ಆಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅದಕ್ಕಾಗಿ ನಿರಂತರ ಓದಿನಲ್ಲಿ ತಲ್ಲೀನರಾಗಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಶಿಬಿರಾರ್ಥಿಗಳು ಮೊದಲನೆಯದಾಗಿ ತಮ್ಮಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವ ರೂಢಿಸಿಕೊಳ್ಳಬೇಕು. ಕೆಲವೊಮ್ಮೆ ವಿಫಲರಾದರೂ ಮುಂದೊಂದು ದಿನ ಸಫಲರಾಗಬಹುದು. ಆದರೆ ನಿರಂತರ ಓದಿನಲ್ಲಿ ತಲ್ಲೀನರಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ ಮಾಡುವುದಾದರೆ ಅದೇ ಕಾಯಕವೇ ಕೈಲಾಸ ಎಂಬಂತಾಗುತ್ತದೆ. ವಿದ್ಯಾರ್ಥಿಗಳು ಅತ್ತ ಇತ್ತ ನೋಡದೆ ಓದಿನೆಡೆಗೆ ಮಾತ್ರವೇ ಗಮನಹರಿಸಿದರೆ ಫಲ ಲಭಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕುಲಸಚಿವ ಪ್ರೊ. ಕೆ.ಎಲ್.ಎನ್. ಮೂರ್ತಿ ಮಾತನಾಡಿ, ಕರಾಮುವಿ ನೀಡುತ್ತಿರುವ ತರಬೇತಿಯ ಪ್ರಯೋಜನ ಪಡೆಯಬೇಕು. ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದರು.
ಹಣಕಾಸು ಅಧಿಕಾರಿ ಡಾ. ಎ. ಖಾದರ್ ಪಾಷ ಮಾತನಾಡಿದರು. ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಕೆ.ಬಿ. ಪ್ರವೀಣ, ಡೀನ್ ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಹಾಯಕ ಪ್ರಾಧ್ಯಾಪಕರಾದ ಎಚ್ ಬೀರಪ್ಪ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್, ಸಂಪನ್ಮೂಲ ವ್ಯಕ್ತಿ ರೋಹನ್ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net