

ಮಂಜುನಾಥ ನಂದಿಹಳ್ಳಿ ಅಳ್ನಾವರ
ಊರು ತಲುಪಲು ಸಮರ್ಪಕ ಬಸ್ ಸೌಲಭ್ಯಗಳಿಲ್ಲ. ಶಾಲೆ-ಕಾಲೇಜ್ಗೆ ತೆರಳಲು ನಿತ್ಯ 6 ಕಿಮೀ ಕಾಲ್ನಡಿಗೆಯಲ್ಲಿ ಸಂಚರಿಸಲೇಬೇಕು. ಇನ್ನು, ದೈನಂದಿನ ಅವಶ್ಯಕ ವಸ್ತುಗಳನ್ನು ತರಲು ಹಾಗೂ ತುರ್ತು ಸಂದರ್ಭಗಳಲ್ಲಿ ತೆರಳಲು ಅಳ್ನಾವರ ರೈಲು ಹಳಿಯ ಮಾರ್ಗವೇ ಅನಿವಾರ್ಯ.
ಇದು ಅಳ್ನಾವರ-ಖಾನಾಪುರ ತಾಲೂಕಿನ ಗಡಿಭಾಗದ ಗ್ರಾಮಗಳ ಜನರ ಪ್ರತಿದಿನದ ಗೋಳು.
ಅಳ್ನಾವರ ಪಟ್ಟಣದ ರೈಲು ಹಳಿ ಮಾರ್ಗದ ಮೂಲಕವೇ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗಡಿಭಾಗದ ಪುರ, ಗೋದಗೇರಿ, ಗೋದಳ್ಳಿ, ತಾವರಗಟ್ಟಿ ಗ್ರಾಮಸ್ಥರು, ಶಾಲೆ-ಕಾಲೇಜ್ಗಳ ವಿದ್ಯಾರ್ಥಿಗಳು ನಿತ್ಯ ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ. ಇಂಥದ್ದರಲ್ಲಿ ಬಸ್ ಸೌಲಭ್ಯವೇ ಇಲ್ಲದ ಪುರ ಗ್ರಾಮದ ವಿದ್ಯಾರ್ಥಿನಿಯರು ಬುಧವಾರ ರೈಲಿನಡಿ ಸಿಲುಕಿ ಸಾವನ್ನಪ್ಪಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.
ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಖಾನಾಪುರ ತಾಲೂಕಿನ ಪುರ ಗ್ರಾಮದ ಕಲಾವತಿ ಹಾಗೂ ನಿಖಿತಾ ಅವರು ಬುಧವಾರ ಬೀಳ್ಕೊಡುಗೆ ಸಮಾರಂಭ ಮುಗಿಸಿ ಸಂಜೆ ಅಳ್ನಾವರ ಪಟ್ಟಣದ ರೈಲು ಹಳಿ ಮಾರ್ಗದ ಮೂಲಕ ನಡೆದುಕೊಂಡು ಬರುತ್ತಿದ್ದರು. ಎರಡು ಹಳಿಗಳ ಮೇಲೆ ಹಿಂಭಾಗ-ಮುಂಭಾಗ ಆಗಮಿಸುತ್ತಿದ್ದ ರೈಲುಗಳಲ್ಲಿ ಹಿಂಬದಿಯಿಂದ ಬಂದ ರೈಲಿಗೆ ಸಿಲುಕಿದ ಕಲಾವತಿ ಸ್ಥಳದಲ್ಲೇ ಮೃತಪಟ್ಟರೆ, ನಿಖಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಯರ ಸಾವಿನಿಂದ ಗ್ರಾಮದಲ್ಲಿ ಈಗ ಶೋಕ ಮಡುಗಟ್ಟಿದೆ.
ಕೂಲಿಕಾರ ಮಂಜುನಾಥ ಬೊಬಾಟೆ ದಂಪತಿ ಮಗಳಾದ ಕಲಾವತಿಗೆ ಮದುವೆಯಾಗಿರುವ ಒಬ್ಬ ಅಕ್ಕ ಹಾಗೂ ಪ್ರೌಢ ಶಾಲೆಯಲ್ಲಿ ಓದುತ್ತಿರುವ ತಮ್ಮ ಇದ್ದಾನೆ. ತಂದೆ-ತಾಯಿಯರ ಕೂಲಿ ಕೆಲಸದಿಂದ ಮುಕ್ತಿಗೊಳಿಸಲು ಉನ್ನತ ಶಿಕ್ಷಣ ಪಡೆದು ನೌಕರಿ ಕೆಲಸದ ಕನಸು ಕಂಡಿದ್ದ ಕಲಾವತಿಗೆ ಕಾಲೇಜ್ನ ಬೀಳ್ಕೊಡುಗೆ ಕಾರ್ಯಕ್ರಮವೇ ಕೊನೆಯಾಗಿ ಹೋಯಿತು. ಮಗಳು ವಿದ್ಯಾವಂತಳಾಗಿ ನೌಕರಿ ಪಡೆದು ನಮ್ಮನ್ನು ಸಲಹುವಳು ಎಂಬ ಆಶಾಗೋಪುರ ಕಟ್ಟಿಕೊಂಡಿದ್ದ ಹೆತ್ತವರಿಗೆ ಗುರುವಾರ ಬೆಳಗ್ಗೆ ಮಗಳ ಅಂತ್ಯಕ್ರಿಯೆ ಮಾಡುವಾಗ ಕಣ್ಣೀರು ಕೋಡಿಯಾಗಿ ಹರಿಯಿತು.
ಇದ್ದೊಬ್ಬ ತಂಗಿ ವಿದ್ಯಾವಂತಳಾಗಲಿ: ತಮಗಿರುವ 3.5 ಎಕರೆ ಜಮೀನಿನಲ್ಲಿ ಕೃಷಿಯೊಂದಿಗೆ ಕೂಲಿ ಮಾಡುತ್ತಿರುವ ರಮೇಶ ಪಾಟೀಲ ದಂಪತಿಯ ಮಗಳಾದ ನಿಖಿತಾಗೆ ಗೋವಾದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಇಬ್ಬರು ಅಣ್ಣಂದಿರು ಇದ್ದಾರೆ. ಒಬ್ಬಳೇ ತಂಗಿ ಚೆನ್ನಾಗಿ ಕಲಿತು ವಿದ್ಯಾವಂತಳಾಗಲಿ ಎಂದು ಕನಸು ಕಟ್ಟಿಕೊಂಡಿದ್ದರು. ಆದರೆ, ಈ ಕುಟುಂಬಕ್ಕೆ ಬುಧವಾರ ಸಂಜೆ ನಡೆದ ದುರ್ಘಟನೆಯಲ್ಲಿ ನಿಖಿತಾ ರೈಲಿನಡಿ ಸಿಲುಕಿ ಗಾಯಗೊಂಡ ಸುದ್ದಿ ಬರಸಿಡಿಲು ಬಡಿದಂತಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಗಳು ಮೃತಪಟ್ಟಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಖಾನಾಪುರ ತಾಲೂಕಿನ ಗಡಿ ಭಾಗದಲ್ಲಿರುವ ಅನೇಕ ಹಳ್ಳಿಗಳ ವಿದ್ಯಾರ್ಥಿಗಳು ನಿತ್ಯವೂ ಆರು ಕಿಲೋ ಮೀಟರ್ವರೆಗೆ ನಡೆದುಕೊಂಡು ಶಾಲೆ-ಕಾಲೇಜ್ಗೆ ತಲುಪುವಂತಾಗಿದೆ. ಈ ತಾಲೂಕಿನ ರಾಮನಗರಕ್ಕೆ ನಿತ್ಯ 5 ಸಮಯದಲ್ಲಿ ಗೋವಾ ರಸ್ತೆ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ ಅನ್ನು ಪುರ, ಗೋದಗೇರಿ, ಗೋದಳ್ಳಿ ಮಾರ್ಗವಾಗಿ ಓಡಿಸಿದರೆ ಈ ಭಾಗದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. | ಸಂದೀಪ ಪಾಟೀಲ ಪುರ ಗ್ರಾಮಸ್ಥ
ಇದೇ ಮಾರ್ಗದಲ್ಲಿ ಕಬ್ಬು ಸಾಗಿಸುವ ವಾಹನಗಳು ಸಂಚರಿಸುತ್ತಿವೆ. ಆದರೆ, ಹಲವು ದಶಕಗಳಿಂದ ಬಸ್ ಸೌಕರ್ಯ ಇಲ್ಲದೆ ಅನಿವಾರ್ಯತೆಯಿಂದ ಅಳ್ನಾವರ ಪಟ್ಟಣಕ್ಕೆ ಸಮೀಪ ಎನಿಸಿರುವ ರೈಲು ಹಳಿ ಮೂಲಕ ಜೀವ ಭಯದಿಂದ ಜನರು ಸಂಚರಿಸುತ್ತಿದ್ದಾರೆ. ಈ ಭಾಗದ ಹಳ್ಳಿಗಳ ಸಮಸ್ಯೆಗಳನ್ನು ಪರಿಹರಿಸುವತ್ತ ಸರ್ಕಾರವು ಗಮನ ನೀಡಬೇಕು. ಬಸ್ ಸೌಕರ್ಯವನ್ನು ಒದಗಿಸಿದರೆ ರೈಲಿನಡಿ ಸಿಲುಕಿ ಪ್ರಾಣ ಕಳೆದುಕೊಳ್ಳುವಂಥ ದುರ್ಘಟನೆಗಳು ಸಂಭವಿಸಲಾರವು. | ಮಹೇಶ ಸಾಲಗುಡಿಯರ ಅಳ್ನಾವರ, ಪುರ ಗ್ರಾಮದ ಹತ್ತಿರ ಜಮೀನಿರುವ ರೈತ