

ಧಾರವಾಡ: ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕನ್ನಡ ಭಾಷಾ ಬೋಧಕರ ಪರಿವಾರದ ಸಹಯೋಗದಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರದಂದು ಕನ್ನಡ ಭಾಷಾ ಬೋಧಕರ ಕಾರ್ಯಾಗಾರ ಮತ್ತು ಎಸ್ಎಸ್ಎಲ್ಸಿಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿತ್ತು.
ಬಿಇಒ ಅಶೋಕ ಸಿಂಧಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯು ಅತ್ಯಂತ ಸರಳ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಬೋಧಕರು, ಕಾರ್ಯತಂತ್ರಗಳನ್ನು, ಭಾಷಾ ಪ್ರಾವಿಣ್ಯತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ.ಎಸ್.ಬಿ. ಕಲ್ಲೂರ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಕನ್ನಡ ವಿಷಯ ಪರಿವೀಕ್ಷಿ ಡಾ. ಪೂರ್ಣಿಮಾ ಮುಕ್ಕುಂದಿ, ಹೊಸ ಪರೀಕ್ಷಾ ಪದ್ಧತಿ ಬಗ್ಗೆ ಮಾತನಾಡಿದರು.
ಕಸಾಪ ಧಾರವಾಡ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್, ಶಹರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ನೋಡಲ್ ಅಧಿಕಾರಿ ವಿಜಯಕುಮಾರ ಕರಿಕಟ್ಟಿ, ಎಸ್.ಎಸ್. ಹೂಗಾರ, ರಾಜೇಶ್ವರಿ ಶೆಟ್ಟಿ, ಬಸವರಾಜ ಪಾಟೀಲ ಇತರರು ಇದ್ದರು.