

ಕಡೂರು: ಕನಕರಾಯಸ್ವಾಮಿ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಬೈಪಾಸ್ ರಸ್ತೆಯ ಕನಕರಾಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಚಾಲನೆ ನೀಡಿ ಮಾತನಾಡಿ, ಕನಕರಾಯನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿ ಸಂಪರ್ಕ ರಸ್ತೆ ಕಾರ್ಯವಾಗಬೇಕಿದೆ. ದೇವಾಲಯದ ಅಭಿವೃದ್ಧಿಗೆ ಪುರಸಭೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕನಕದಾಸರು ತಿರುಪತಿಗೆ ಪ್ರಯಾಣಬೆಳೆಸುವಾಗ ಈ ಪ್ರದೇಶದಲ್ಲಿ ತಂಗಿದ್ದರಿಂದ ಬಂಡೆಗಲ್ಲಿನಲ್ಲಿಯೇ ಶ್ರೀನಿವಾಸ ದರ್ಶನ ನೀಡಿದ ಪ್ರತೀತಿ ಇದೆ. ಯುವಕರ ತಂಡದ ಸಮಿತಿ ರಚಿಸಿಕೊಂಡು ದೇವಾಲಯದ ಪುನಶ್ಚೇತನಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸಕ ಕೆ.ಎಸ್.ಆನಂದ್ ಅವರ ತಾಯಿ ಲಕ್ಕಮ್ಮ ಸಿದ್ದಪ್ಪ ಜಿಪಂ ಸದಸ್ಯರಾಗಿದ್ದ ಅವಧಿಯಲ್ಲಿ ದೇವಾಲಯಕ್ಕೆ ಕೊಳವೆಬಾವಿ ಕೊರೆಯಿಸಲಾಗಿತ್ತು. ದೇವಸ್ಥಾನದ ಪ್ರಗತಿಗೆ ಶಾಸಕರು ಹೆಚ್ಚಿನ ಕಾಳಜಿ ವಹಿಸಿದ್ದು, ದೇವಾಲಯದ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ದೇವಾಲಯದ ಪರಿಸರವನ್ನು ಪ್ರವಾಸಿ ತಾಣವಾಗಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಗಂಟೆ ಶ್ರೀಧರ್‌ನಾಗು, ಸಮಿತಿ ಸದಸ್ಯರಾದ ಸಂಜಯ್, ಅಜೇಯ್, ಶೇಷಾದ್ರಿ, ಕಿರಣ್ ಕಲ್ಲಯ್ಯ, ಸುಮಂತ್, ಸೋಮು, ವಿಕ್ಕಿ, ಶಶಿ, ಶ್ರೀನಿವಾಸ್, ಪುರಸಭೆ ಸದಸ್ಯ ಸಯ್ಯದ್ ಯಾಸಿನ್, ಚಿನ್ನರಾಜು, ತಿಮ್ಮಯ್ಯ, ಉಮೇಶ್, ಪ್ರಭು ಒಡೆಯರ್ ಇತರರಿದ್ದರು.