ಕನಕರ ತತ್ವ ಬದುಕಿಗೆ ದಾರಿದೀಪ

Oplus_131072
ಹುಮನಾಬಾದ್ ಥೇರ್ ಮೈದಾನದಲ್ಲಿ ಭಾನುವಾರ ಭಕ್ತ ಕನಕದಾಸರ ೫೩೭ನೇ ಜಯಂತ್ಯುತ್ಸವವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಶ್ರೀ ಸಿದ್ಧ ರಾಮಾನಂದಪುರಿ ಸ್ವಾಮೀಜಿ, ಸುಭಾಷ ಕಲ್ಲೂರ, ಸೋಮನಾಥ ಪಾಟೀಲ್, ಬಸವರಾಜ ಆರ್ಯ, ಶಿವರಾಜ ಚೀನಕೇರಾ ಇತರರಿದ್ದರು.
Published on

ಹುಮನಾಬಾದ್: ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ, ಉಪದೇಶಗಳು ಅತ್ಯಮೂಲ್ಯವಾಗಿದ್ದು, ನೆಮ್ಮದಿ ಬದುಕಿಗೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಅವುಗಳನ್ನು ಪಾಲಿಸಿ ಸಾರ್ಥಕ ಜೀವನ ಸಾಗಿಸಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಥೇರ್ ಮೈದಾನದಲ್ಲಿ ಭಾನುವಾರ ಶ್ರೀ ಭಕ್ತ ಕನಕದಾಸರ ೫೩೭ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಸಾಮರಸ್ಯ, ಸಮಾನತೆ ಸಾರಿ ಜೀವನದುದ್ದಕ್ಕೂ ಹೋರಾಡಿದರು. ಜಯಂತ್ಯುತ್ಸವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ಸಮಿತಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸಮಾಜದ ಜನರ ಆಶಯದಂತೆ ಬರುವ ದಿನಗಳಲ್ಲಿ ಸುಸಜ್ಜಿತ ಕನಕದಾಸ ಭವನ, ಕ್ರಾಂತಿವಿರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಸಂಸ್ಥಾನದ ಕಲಬುರಗಿ ವಿಭಾಗೀಯ ತಿಂಥಣಿ ಶಾಖಾ ಮಠದ ಶ್ರೀ ಸಿದ್ಧ ರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಭಕ್ತ ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕೆಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಶಾಸಕ ಸುಭಾಷ ಕಲ್ಲೂರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಉತ್ಸವ ಸಮಿತಿ ಅಧ್ಯಕ್ಷ ಶಿವರಾಜ ಚೀನಕೇರಾ ಮಾತನಾಡಿದರು. ಪ್ರಮುಖರಾದ ವಿಶ್ವನಾಥ ಪಾಟೀಲ್, ಅಭಿಮನ್ಯು ನಿರಗುಡೆ, ಗಜೇಂದ್ರ ಕನಕಟಕರ, ಮಲ್ಲಿಕಾರ್ಜುನ ಪಾಟೀಲ್, ಸಂತೋಷ ಪಾಟೀಲ್, ಸುನೀಲ ಪಾಟೀಲ್, ಡಾ.ಭದ್ರೇಶ ಪಾಟೀಲ್, ಜಮೀರ್ ಅಹ್ಮದ್, ಸಮಿತಿಯ ನಾರಾಯಣ ರಾಂಪುರೆ, ಪ್ರಕಾಶ ಸೋನಕೇರಾ, ವಿನಾಯಕ, ಪಂಡಿತ ಹಿಪ್ಪರಗಿ, ಬೀರಪ್ಪ ಕೊಂಡಬಲ್, ಶೇಷಪ್ಪ ಪಾವಡೆ , ಪವನ ಗೊಂಡ, ಕಾರ್ಯದರ್ಶಿ ಯಲಪ್ಪ ಇತರರಿದ್ದರು.

ಭವ್ಯ ಮರವಣಿಗೆ: ಪಟ್ಟಣದ ಬೀರಲಿಂಗೇಶ್ವರ ಮಂದಿರದಿಂದ ಪ್ರಮುಖ ರಸ್ತೆಯ ಮೂಲಕ ಥೇರ್ ಮೈದಾನದವರೆಗೆ ಭಕ್ತ ಕನಕದಾಸರ ಭಾವಚಿತ್ರದ ಭವ್ಯ ಮರವಣಿಗೆ ನಡೆಯಿತು. ಡೊಳ್ಳು ಕುಣಿತ, ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರು ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net