

ರಾಮದುರ್ಗ, ಬೆಳಗಾವಿ: ಕೀರ್ತನೆಗಳ ಮೂಲಕ ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ ಕನಕದಾಸರ ಆದರ್ಶಗಳು ಕೇವಲ ಕುರುಬ ಸಮಾಜಕ್ಕೆ ಅಷ್ಟೇ ಅಲ್ಲದೆ ಮನುಕುಲಕ್ಕೆ ದಾರಿದೀಪವಾಗಿವೆ. ದಾಸಶ್ರೇಷ್ಠರ ವಚನಗಳನ್ನು ಸರ್ವರೂ ಅಧ್ಯಯನ ಮಾಡಿದಲ್ಲಿ ಮಾತ್ರ ಅವರ ವ್ಯಕ್ತಿತ್ವ ಅರಿಯಲು ಸಾಧ್ಯವಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಬಡ ಕುರಿಗಾಹಿಗಳಿಗೆ 20 ಕುರಿ, ಒಂದು ಮೇಕೆ ಕೊಡಮಾಡಲು ತೀರ್ಮಾನಿಸಿದೆ. ಕುರುಬ ಸಮಾಜದ ಬಡವರು ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಹಿತ ಕಾಯುವ ನಿಟ್ಟಿನಲ್ಲಿ ಅಗತ್ಯ ಸಹಾಯ ಸಹಕಾರ ನೀಡುತ್ತೇನೆ. ರಾಜ್ಯ ಸರ್ಕಾರ ಸಹ ಸಮಾಜದ ಏಳ್ಗೆಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು. ಸುರೇಬಾನ ಸರ್ಕಾರಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಮೋಟೆ ಕನಕದಾಸರ ಜೀವನ, ಸಾಧನೆ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು. ಕುರುಬ ಸಮಾಜದ ಅಧ್ಯಕ್ಷ ವಿಠ್ಠಲ ಜಟಗನ್ನವರ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಕುರುಬರ ಸಂಘದ ರಾಜ್ಯ ಸಹಕಾರ್ಯದರ್ಶಿ ಅಶೋಕ ಮೆಟಗುಡ್ಡ, ಜಗದೀಶ ಕಾಮನ್ನವರ, ಮಾಜಿ ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ, ಶೇಖರ ಸಿದ್ಲಿಂಗಪ್ಪನವರ, ಮಾಳಿಂಗರಾಯ, ಪಡಿಯಪ್ಪ ಕ್ವಾರಿ, ನಿಂಗಪ್ಪ ಕರಿಗಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ, ವಾಸು ಇತರರು ಇದ್ದರು.