

ಔರಾದ: ಕನಕದಾಸರ ಬದುಕು ಮತ್ತು ತತ್ವಗಳು ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಡಿಸೆಂಬರ್ 11ರಂದು ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಕನಕದಾಸರು ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಂಧಶ್ರದ್ಧೆಯಂತಹ ಮಾರಕ ಅಂಶಗಳನ್ನು ತೊಲಗಿಸಲು ತಮ್ಮದೇ ರೀತಿಯಲ್ಲಿ ಹೋರಾಡಿದ್ದ ಆದರ್ಶ ಸಂತರು ಎಂದು ಬಣ್ಣಿಸಿದರು.
ಕನಕದಾಸರ ಆದರ್ಶಗಳನ್ನು ಪಾಲಿಸಿದಲ್ಲಿ ಸಾಮರಸ್ಯದ ಜೀವನ ಸಾಗಿಸಲು ನೆರವಾಗುವುದರಿಂದ ಅವರ ಬದುಕು, ಬರಹ ಮತ್ತು ಸಂದೇಶಗಳನ್ನು ಇಂದಿನ ಪೀಳಿಗೆಗೆ ತಿಳಿಹೇಳುವ ಅವಶ್ಯಕತೆಯಿದೆ. ಇಂತಹ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.
ಮುಧೋಳ(ಬಿ) ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು. ಗ್ರಾಮದಲ್ಲಿರುವ ಕನಕ ಭವನಕ್ಕೆ ಶೀಘ್ರದಲ್ಲೇ ಕಾಂಪೌಂಡ್ ನಿರ್ಮಿಸಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಾಮಾಜಿಕ ಕಾರ್ಯಕರ್ತರಾದ ಬೀರಣ್ಣಾ ಪೂಜಾರಿ ಅವರು ಕನಕದಾಸರ ಜೀವನ ಮತ್ತು ತತ್ವಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅಮೃತರಾವ ವಟಗೆ,ಧನರಾಜ ಗುಡ್ಡಾ, ಲಾಲ ಅಹ್ಮದ್, ಗಿರೀಶ ವಡೆಯರ್, ಸಚಿನ್ ರಾಠೋಡ, ಗಜಾನಂದ ವಟಗೆ, ಬಾಲಾಜಿ ಬೆಳಕುಣಿ, ಸಂತೋಷ, ಕಂಟೆಪ್ಪಾ, ನಾಗನಾಥ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.