

ಅರಸೀಕೆರೆ: ಕೀರ್ತನೆಗಳ ಮೂಲಕ ಸಾಮಾಜಿಕ ಸಮಾನತೆ ಸಾರಿದ ಕನಕದಾಸರ ಚಿಂತನೆಗಳು ಆದರ್ಶಪ್ರಾಯ ಎಂದು ಕೆ.ಆರ್.ನಗರ ತಾಲೂಕಿನ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೈರಾಂಬುಧಿ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ ಕನಿಷ್ಠರೂ ಅಲ್ಲ ಎಂದು ಜಾತಿ ವ್ಯವಸ್ಥೆ ಹೊಡೆದೋಡಿಸುವ ಸಂದೇಶವನ್ನು ಮನುಕುಲಕ್ಕೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಎಲ್ಲರಿಗೂ ಒಳಿತಾಗಲಿದೆ ಎಂದರು.
ಶೈಕ್ಷಣಿಕ, ಸಾಮಾಜಿಕ,ರಾಜಕೀಯ ಸೇರಿ ಎಲ್ಲ ಬಗೆಯ ಸರ್ಕಾರಿ ಸವಲತ್ತುಗಳನ್ನು ಪಡೆಯಲು ತಮ್ಮಲ್ಲಿನ ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಾಲಕರಿಗೆ, ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಬೆಳಸಿಕೊಳ್ಳುವ ಜತೆಗೆ ಉನ್ನತ ಹುದ್ದೆ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಮಾತನಾಡಿ, ಹಿಂದುಳಿದ ವರ್ಗದ ಸಮುದಾಯದ ಜನರ ಮೂಗಿಗೆ ತುಪ್ಪ ಹಚ್ಚಿ ಅಧಿಕಾರ ಅನುಭವಿಸುವ ಪ್ರವೃತ್ತಿಗೆ ಕೊನೆ ಹಾಡುವ ಕಾಲ ಹತ್ತಿರವಾಗಿದೆ. ಎಲ್ಲ ಸ್ಥಾನಮಾನ ಪಡೆಯಲು ಪಕ್ಷಭೇದ ಮರೆತು ಹೋರಾಟ ನಡೆಸೋಣ ಎಂದರು.
ಜಿಪಂ ಮಾಜಿ ಸದಸ್ಯರಾದ ಪ್ರೇಮಾ ನಿಂಗಪ್ಪ, ಪಟೇಲ್ ಶಿವಪ್ಪ, ತಾಲೂಕು ಕುರುಬರ ಸಂಘದ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಬಿ.ಆರ್.ಜಯಣ್ಣ, ಬಿಜೆಪಿ ನಗರಾಧ್ಯಕ್ಷ ಪುರುಷೋತ್ತಮ್, ಗ್ರಾಪಂ ಸದಸ್ಯೆ ಶಶಿಕಲಾ ಸಿದ್ದೇಗೌಡ, ದೇವರಾಜ್, ವಿಜಯಕುಮಾರ್ ಸೇರಿ ಹಲವರು ಪಾಲ್ಗೊಂಡಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆ ಹೊಂದಿದ್ದ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.