ಕನಕ ಜಯಂತಿ ಜಿಲ್ಲಾದ್ಯಂತ 18ರಂದು ಆಚರಣೆ

ADC
Published on

ಚಿತ್ರದುರ್ಗ: ಕನಕ ಜಯಂತಿ ನ. 18ರಂದು ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಜಯಂತಿ ಆಚರಣೆ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಕನಕದಾಸರ ಭಾವಚಿತ್ರ ಸಮೇತ ಗೌರವ ಸಮರ್ಪಣೆಯೊಂದಿಗೆ ಜಯಂತಿ ಆಚರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗದಲ್ಲಿ ಅಂದು ಬೆಳಗ್ಗೆ 9.30ಕ್ಕೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಆರಂಭವಾಗಿ, ಸಂಗೊಳ್ಳಿ ರಾಯಣ್ಣ, ಗಾಂಧಿ, ಎಸ್‌ಬಿಐ, ಡಾ.ಬಿ.ಆರ್.ಅಂಬೇಡ್ಕರ್, ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಲಿದೆ. ಮಧ್ಯಾಹ್ನ 12.30ಕ್ಕೆ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಡೊಳ್ಳು, ವೀರಗಾಸೆ ಸೇರಿ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕನಕದಾಸರ ಕೀರ್ತನೆಗಳ ಗೀತಗಾಯನ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಲಾಗುವುದು. ಜಯಂತಿ ಅಂಗವಾಗಿ ಮುನ್ನ ದಿನ ಕನಕದಾಸರು ಸೇರಿ ನಗರದೆಲ್ಲ ಪ್ರತಿಮೆ ಹಾಗೂ ವೃತ್ತಗಳಿಗೂ ದೀಪಾಲಂಕಾರ-ಪುಷ್ಪಾಲಂಕಾರ ಮಾಡಲಾಗುವುದು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಕುರುಬ ಸಮಾಜದ ಐವರಿಗೆ ಹಾಗೂ ಇತರೆ ಐವರಿಗೆ ಸಮಾಜದಿಂದ ಇದೇ ವೇಳೆ ಸನ್ಮಾನಿಸಲು ಅವಕಾಶ ಮಾಡಿಕೊಡಬೇಕು ಎಂದು ಸಮಾಜದ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು.

ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಜಿಪಂ ಸಿಪಿಒ ಗಾಯತ್ರಿ, ನಗರಸಭೆ ಪೌರಾಯುಕ್ತೆ ರೇಣುಕಾ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕುರುಬ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮ್, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಚಂದ್ರಶೇಖರ್, ಓಂಕಾರಮೂರ್ತಿ, ಕುಮಾರ್ ಗೌಡ್ರು, ಮಂಜುನಾಥ, ಮಂಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net