

ಹಾಸನ: ಕದ್ದ ಮಾಲನ್ನು ಖರೀದಿ ಮಾಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿ ಸೋಮವಾರ ರಾತ್ರಿ ಗುಜರಿ ಅಂಗಡಿಗೆ ಬೆಂಕಿ ಹಾಕಿದ್ದು, ಅಗ್ನಿಯ ಕೆನ್ನಾಲಿಗೆಗೆ ಗುಜರಿ ಅಂಗಡಿ ಸಂಪೂರ್ಣ ಹೊತ್ತಿ ಊರಿದಿದೆ.
ನಗರದ ಸುಬೇದಾರ್ ನಾಗೇಶ್ ವೃತ್ತ, ರಿಂಗ್ ರಸ್ತೆ, ಸಾಲಗಾಮೆ ರಸ್ತೆಗೆ ಹೊಂದಿಕೊಂಡಂತೆ ಇರುವ ನದೀಮ್ ಪಾಷಾ ಎಂಬುವರಿಗೆ ಸೇರಿದ ಗುಜರಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಸೋಮವಾರ ಬೆಳಗ್ಗೆ ವ್ಯಕ್ತಿ ಓರ್ವ ಕದ್ದ ಮಾಲನ್ನು ಮಾರಲು ಬಂದಿದ್ದಾನೆ. ನಾವು ಇಂತಹ ಮಾಲನ್ನು ಕೊಂಡುಕೊಳ್ಳುವುದಿಲ್ಲ ಎಂದು ನದೀಮ್ ಪಾಷಾ ಅವರಿಗೆ ಹೇಳಿದ್ದಾರೆ. ಈ ವೇಳೆ ಕೆಲ ಸಮಯ ಇಬ್ಬರ ನಡುವೆ ಮಾತಿನ ಚಕಾಮುಖಿ ನಡೆದಿದೆ. ನಂತರ ಆತ ಹೊರಟು ಹೋಗಿದ್ದಾನೆ.
ಎಂದಿನಂತೆ ರಾತ್ರಿ ಗುಜರಿ ಅಂಗಡಿಯ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ. ನಂತರದಲ್ಲಿ ರಾತ್ರಿ ಸುಮಾರು 11 ರಿಂದ 12 ಗಂಟೆ ಸಮಯದಲ್ಲಿ ಬೆಳಗ್ಗೆ ಬಂದಿದ್ದ ವ್ಯಕ್ತಿ ಗುಜರಿ ಅಂಗಡಿ ಮುಂದೆ ನಿಂತು ಅಂಗಡಿ ಮುಂದೆ ಬರೆದಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ‘ನೀನು ನನ್ನ ಮಾಲನ್ನು ತೆಗೆದುಕೊಂಡಿಲ್ಲ. ಅದಕ್ಕೆ ನಿನ್ನ ಗುಜರಿ ಅಂಗಡಿಗೆ ಬೆಂಕಿ ಹಾಕುತ್ತೇನೆ,’ ಎಂದು ಹೇಳಿ ಕಾಲ್ ಕಟ್ ಮಾಡಿ, ಗುಜರಿ ಅಂಗಡಿಗೆ ಬೆಂಕಿ ಹಾಕಿದ್ದಾನೆ.
ನಂತರದಲ್ಲಿ ಎದುರು ಇದ್ದ ಅಂಗಡಿ ಮಾಲೀಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿ ಎಲ್ಲೆಡೆ ಆವರಿಸಿತ್ತು. ಒಂದು ಅಗ್ನಿ ಶಾಮಕ ದಳ ನೀರು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ನೀರು ಖಾಲಿ ಆದ ಮೇಲೆ ಖಾಸಗಿ ನೀರಿನ ಟ್ಯಾಂಕರ್ ಮೂಲಕ ಪೊಲೀಸರು ಬೆಂಕಿ ಆರಿಸಲು ಮುಂದಾದರು. ಸತತವಾಗಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಮುಂದಾದರು. ಬೆಂಕಿ ರಭಸಕ್ಕೆ ಪಕ್ಕದಲ್ಲೆ ಇದ್ದ ಮಾರುತಿ ಮೋಟೊ ವಿಒಸಿ ಸರ್ವಿಸ್ ಸೆಂಟರ್ ಮಳಿಗೆ ಕೂಡ ಸುಟ್ಟು ಹೋಗಿದೆ. ಇನ್ನು ಅಕ್ಕ ಪಕ್ಕದಲ್ಲಿದ್ದ ಅನೇಕ ಮನೆಗಳ ಗಾಜುಗಳು ಒಡೆದು ಗೋಡೆಗಳು ಕರಕಲು ಆಗಿವೆ. ಮಾಲೀಕ ನದೀಮ್ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗುಜರಿ ಅಂಗಡಿ ಮಾಲೀಕ ನದೀಮ್ ಪಾಷಾ ಅವರ ಸಹೋದರ ಅರ್ಬಸ್ ಪಾಷಾ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ರಾತ್ರಿ ಕರೆ ಮಾಡಿ ಈ ರೀತಿ ಬೆಂಕಿ ಹಚ್ಚುತ್ತಿರುವುದಾಗಿ ಹೇಳಿ ಬೆಂಕಿ ಹಚ್ಚಿದ್ದಾರೆ. ಸೋಮವಾರ ಕೆಲ ವಸ್ತುಗಳನ್ನು ಮಾರಾಟ ಮಾಡಲು ತಂದಿದ್ದು, ಅಂತಹ ಮಾಲುಗಳನ್ನು ನಾವು ಕೊಂಡುಕೊಳ್ಳುವುದಿಲ್ಲ ಎಂದು ವಾಪಸ್ ಕಳುಹಿಸಿದ್ದೆವು. ರಾತ್ರಿ ಸುಮಾರು 8.30ರ ವೇಳೆಗೆ ಗುಜರಿ ಅಂಗಡಿ ಬಾಗಿಲು ಮುಚ್ಚಿ ಹೋಗಿದ್ದೇವು. ಇದಾದ ನಂತರ ರಾತ್ರಿ 12 ಗಂಟೆಗೆ ಕಾಲ್ ಮಾಡಿ ಬೆಂಕಿ ಇಡುತ್ತಿರುವುದಾಗಿ ಹೇಳಿ ಬೆಂಕಿ ಇಟ್ಟಿದ್ದಾನೆ. ನಮ್ಮ ಅಂಗಡಿ ಮುಂದೆಯೆ ಇದ್ದ ಕ್ಯಾಂಟೀನ್ ಅಂಗಡಿಯವರು ನಮಗೆ ಕರೆ ಮಾಡಿ ಬೆಂಕಿ ಹಚ್ಚಿರುವ ಬಗ್ಗೆ ವಿಚಾರ ತಿಳಿಸಿದರು. ಸುಮಾರು 25 ರಿಂದ 30 ಲಕ್ಷ ರೂ.ವರೆಗೆ ವಸ್ತುಗಳು ಸುಟ್ಟುಹೋಗಿದೆ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ಎಂದು ಒತ್ತಾಯಿಸಿದರು.