

ಬೀಳಗಿ : ಪಹಣಿ ಶರ್ತು ಕಡಿಮೆ ಮಾಡಿಕೊಡಲು ಹತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬೀಳಗಿ ಕಂದಾಯ ಇಲಾಖೆ ಶಿರಸ್ತೆದಾರ ಮಹಾಂತೇಶ ಹುರಕಡ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ಮಂಜುನಾಥ ಕೃಷ್ಣಪ್ಪ ದಳವಾಯಿ ಎಂಬುವವರ ಜಮೀನು ಬೀಳಗಿ ತಾಲೂಕಿನ ಸುನಗ ಗ್ರಾಮದ ಜಮೀನು ರಿಸ ನಂ. 228 ಕ್ಷೇತ್ರ 8 ಎಕರೆ ಜಮೀನಿನ ಉತಾರೆ ಪಹಣಿ ಕಲಂ 11ರಲ್ಲಿರುವ ಶರ್ತು ಕಡಿಮೆ ಮಾಡಿಕೊಡಲು ಶಿರಸ್ತೆದಾರ ಮಹಾಂತೇಶ ಹುರಕಡ್ಲಿ 10 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರನ ಕೈಯಿಂದ ಮಂಗಳವಾರ ಹಣ ತೆಗೆದುಕೊಳ್ಳುತ್ತಿದ್ದಾಗ ಲೋಕಾ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದನ್ನವರ ಮಾರ್ಗದರ್ಶನದಲ್ಲಿ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್‌ಪಿ ಪುಷ್ಪಲತಾ ಎನ್. ನೇತೃತ್ವದಲ್ಲಿ ಸಿಪಿಐರಾದ ಬಸವರಾಜ ಎಂ. ಅವಟಿ, ಬಸಗೌಡ ಜೇ. ಪಾಟೀಲ ಸಿಬ್ಬಂದಿಯಾದ ಬಸವರಾಜ ದೇಸಾಯಿ, ನಾಗಪ್ಪ ಪೂಜಾರಿ, ಹಣಮಂತ ಮಾಸರಡ್ಡಿ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.