ಕತ್ತು ಸೀಳಿ ಹೆತ್ತ ತಾಯಿಯ ಹತ್ಯೆ

0000
Published on

ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರ ಹೊರವಲಯದ ರಾಗರಾಳ್ಳಗುಟ್ಟೆ ಬಳಿ ತಾಯಿಯ ಕತ್ತು ಸೀಳಿ ಮಗನೇ ಕೊಲೆ ಮಾಡಿರುವ ಅಮಾನುಷ ಕೃತ್ಯ ಸೋಮವಾರ ನಡೆದಿದೆ. ರತ್ನಮ್ಮ (56) ಕೊಲೆಯಾದವರು. ಆರೋಪಿ ಗಂಗರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಗಳ ತೆಗೆದು ಹತ್ಯೆ: ಸೋಮವಾರ ಬೆಳಗ್ಗೆ ಕುಡಿದ ಮತ್ತಿನಲ್ಲಿದ್ದ ಗಂಗರಾಜು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹರಿತವಾದ ಚಾಕುವಿನಿಂದ ರತ್ನಮ್ಮ ಅವರ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತಾಯಿ ಮತ್ತು ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಅಂಥದೇ ಮಾತಿನ ಜಗಳ ವಿಕೋಪಕ್ಕೆ ತಿರುಗಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ದೌಡು: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿ ಸಿಕೆ ಬಾಬಾ, ಅಪರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ರವಿ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆಗಾಗ ಜಗಳ: ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ರತ್ನಮ್ಮ ವಾಸ ಮಾಡುತ್ತಿದ್ದರು. ಮನೆಯಲ್ಲಿ ತಾಯಿ ಮಗನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಯಾವ ವಿಚಾರಕ್ಕಾಗಿ ಎಂಬುದು ತನಿಖೆ ಬಳಿಕ ತಿಳಿಯಲಿದೆ. ಸೋಮವಾರವೂ ತಾಯಿ ಮತ್ತು ಮಗ ಜಗಳವಾಡುತ್ತಿರುವುದರನ್ನು ಸ್ಥಳೀಯರು ಗಮನಿಸಿದ್ದಾರೆ. ಜಗಳದ ಮಧ್ಯೆ ತಾಯಿಯ ಕತ್ತಿಗೆ ಚಾಕುವಿನಿಂದ ಇರಿದು ಮಗನೇ ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಕೊಲೆ ಬಳಿಕ ಗ್ರಾಮದಲ್ಲಿ ಹುಚ್ಚಾಟ: ತಾಯಿಯನ್ನು ಕೊಲೆ ಮಾಡಿದ ಗಂಗರಾಜು, ಬಳಿಕ ಚಾಕುವಿನೊಂದಿಗೆ ಗ್ರಾಮದ ಎಲ್ಲೆಡೆ ಓಡಾಡಿ ಗ್ರಾಮಸ್ಥರಿಗೆ ತಾಯಿಯನ್ನು ಕೊಂದಿದ್ದಾಗಿ ಹೇಳಿ ಹುಚ್ಚಾಟವಾಡಿದ್ದಾನೆ. ಮನೆ ಬಳಿಗೆ ಬಂದು ನೋಡಿದ ಗ್ರಾಮಸ್ಥರಿಗೆ ರತ್ನಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡು ಬಂದಿದೆ, ಕೂಡಲೆ ಸ್ಥಳೀಯರು ದೊಡ್ಡಬಳ್ಳಾಫುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದರು. ತಾಯಿಯನ್ನ ಕೊಂದು ಗ್ರಾಮದಲ್ಲಿ ಹುಚ್ಚುಚ್ಚಾಗಿ ಆಡುತ್ತಿದ್ದ ಗಂಗರಾಜು ಪೊಲೀಸರನ್ನು ಕಂಡ ಕೂಡಲೇ ಪರಾರಿಯಾಗಲು ಯತ್ನಿಸಿದ್ದು, ಸುತ್ತುವರಿದ ಪೊಲೀಸರು ಆರೋಪಿಗೆ ಕೋಳ ತೊಡಿಸಿ ವಶಕ್ಕೆ ಪಡೆದರು.

ವಿದ್ಯುತ್ ತಗುಲಿ ಬಾಲಕಿ ಸಾವು

ದೊಡ್ಡಬಳ್ಳಾಪುರ: ಕೊನಘಟ್ಟ ಗ್ರಾಮದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಪೆಂಡಾಲ್ ಬಳಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ. ಗ್ರಾಮದ ಶ್ರೀನಿವಾಸ ಮೂರ್ತಿ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರಿ ಚೇತನಾ(12) ಮೃತೆ. ಭಾನುವಾರ ಬೆಳಗ್ಗೆ ಗಣಪತಿ ಪೆಂಡಾಲ್ ಬಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಚೇತನಾಗೆ ವಿದ್ಯುತ್ ತಂತಿ ತಗುಲಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಸ್ಥಳೀಯರು ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಚೇತನಾ ಕೊನಘಟ್ಟ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಬಾಲಕಿಯ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಸಹಪಾಠಿಗಳು ಚೇತನಾ ಸಾವಿಗೆ ಕಂಬನಿ ಮಿಡಿದಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಣೇಶ ಪ್ರತಿಷ್ಠಾಪನೆಗಾಗಿ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರದಿಂದ ವಿದ್ಯುತ್ ಶಾಕ್ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಈ ಸಂಬಂಧ ಯಾರ ವಿರುದ್ಧವೂ ದೂರು ನೀಡಿಲ್ಲ, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಾದಿಕ್‌ಪಾಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net