ಕತ್ತು ಕೊಯ್ದು ಜೆಡಿಎಸ್ ಮುಖಂಡನ ಹತ್ಯೆ

murder (3)
Published on

ಮೈಸೂರು: ಮೈಸೂರಿನ ಬೆಲವತ್ತ ಗ್ರಾಮದ ರಸ್ತೆಯಲ್ಲೇ ಕತ್ತು ಕೊಯ್ದು ಜೆಡಿಎಸ್ ಮುಖಂಡನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಗ್ರಾಮದ ನಿವಾಸಿ, ಜೆಡಿಎಸ್ ಮುಖಂಡ ಹನುಮಂತು(57) ಕೊಲೆಯಾದವರು. ಭಾನುವಾರ ಸಂಜೆ ಸುಮಾರು 6.30ರಲ್ಲಿ ರಿಂಗ್‌ರೋಡ್‌ನಿಂದ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿದ ಹಂತಕರು ಡಿಕ್ಕಿ ಹೊಡೆಸಿದ್ದಾರೆ.

ಇದರಿಂದ ನಿಯಂತ್ರಣ ತಪ್ಪಿ ಬೀಳುತ್ತಿದ್ದಂತೆ ಹನುಮಂತು ಮೇಲೆರಗಿದ ಹಂತಕರು, ಅವರ ಕತ್ತುಕೊಯ್ದು ಪರಾರಿಯಾಗಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಹಳೇ ವೈಷಮ್ಯದಿಂದ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿದ ನಂತರ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು.

ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮೇಟಗಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net