

ಈ ಗ್ರಾಮದ ಬಹುಪಾಲು ಜನ ಕೂಲಿ ಮಾಡಿಯೇ ಬದುಕುತ್ತಿದ್ದಾರೆ. ಮಹಿಳೆಯರು ಅರಣ್ಯದಿಂದ ಸೌದೆ ಸಂಗ್ರಹಿಸಿ ತಲೆ ಮೇಲೆ ಹೊತ್ತು ನಗರದಲ್ಲಿ ಮಾರಾಟ ಮಾಡುತ್ತಾರೆ. ಮನೆಗಳ ಹಕ್ಕುಪತ್ರ, ಜಮೀನಿನ ಪಹಣಿ, ಶೌಚಗೃಹ, ಅಂಗನವಾಡಿಯೂ ಇಲ್ಲದ ಕಾಲನಿಯನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕುಗ್ರಾಮಗಳ ಸಮಸ್ಯೆ ಬಿಂಬಿಸುವ ವಿಜಯವಾಣಿ ‘ಗ್ರಾಮ ಸಂಚಾರ’ದಲ್ಲಿ ಕಾಲನಿಯ ಸಮಸ್ಯೆಯನ್ನು ಕೈಲಾಂಚ ವರದಿಗಾರ ವಿಭೂತಿಕೆರೆ ಶಿವಲಿಂಗಯ್ಯ ತೆರೆದಿಟ್ಟಿದ್ದಾರೆ.
ಕೈಲಾಂಚ: ಜಿಲ್ಲಾ ಕೇಂದ್ರದಿಂದ 7 ಕಿ.ಮೀ. ದೂರದಲ್ಲಿದೆ ಈ ಗ್ರಾಮ. ಇಲ್ಲಿ ಕಣ್ಣು ಹಾಯಿಸಿದಷ್ಟು ತೆಂಗಿನಗರಿ ಗುಡಿಸಲುಗಳು ಹಾಗೂ ಸಿಮೆಂಟ್ ಶೀಟ್ ಮನೆಗಳು. ಗ್ರಾಮದಲ್ಲಿ ಒಂದೇ ಸಮುದಾಯದ 46 ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹಂದಿಗೊಂದಿ ಅರಣ್ಯದಂಚಿನಲ್ಲಿ ಸುಂದರ ಪ್ರಕೃತಿಯ ಮಧ್ಯೆ ಇದ್ದರೂ ಹಲವಾರು ಸಮಸ್ಯೆಗಳನ್ನು ಬೆನ್ನಿಗೆ ಕಟ್ಟಿಕೊಂಡಿದೆ. ಈ ಗ್ರಾಮವೇ ಇರುಳಿಗರ ಕಾಲನಿ. ಓಡಾಡಲು ರಸ್ತೆ ಇದ್ದರೂ, ಗ್ರಾಮ ಹಿಂದುಳಿದಿರುವುದಕ್ಕೆ ಹಲವಾರು ಸಾಕ್ಷ್ಯಗಳು ಗೋಚರಿಸುತ್ತವೆ. ಗ್ರಾಮದಲ್ಲಿರುವ ಗುಡಿಸಲು ಹಾಗೂ ಶೀಟ್ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಗ್ರಾಮದ ಅರ್ಧದಷ್ಟು ಮನೆಗಳು ಕತ್ತಲಲ್ಲೇ ಇವೆ. ಅನಕ್ಷರಸ್ಥರೇ ತುಂಬಿರುವ ಗ್ರಾಮದಲ್ಲಿ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಸೋತಿರುವ ನಿವಾಸಿಗಳು ಸಾರಿಗೆ, ಮನೆಗಳ ಹಕ್ಕುಪತ್ರ, ಜಮೀನಿನ ಪಹಣಿ, ಶೌಚಗೃಹ, ಆಶ್ರಯ ನಿವೇಶನ ಸೇರಿ ಮಕ್ಕಳಿಗೆ ಅಂಗನವಾಡಿ ಕೇಂದ್ರವೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿದ್ದರೂ ಇಲ್ಲಿನ ಜನರ ರೋದನ ಅಧಿಕಾರಿಗಳಿಗೆ ಮಾತ್ರ ಕೇಳುತ್ತಿಲ್ಲ.
ಖಾತೆ ಇಲ್ಲ: ಹಂದಿಗೊಂದಿ ಅರಣ್ಯದಲ್ಲಿ ವಾಸವಿದ್ದ ಇವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ 36 ಮಂದಿಗೆ ಬಹಳ ವರ್ಷಗಳ ಹಿಂದೆಯೇ ವ್ಯವಸಾಯಕ್ಕೆ ಭೂಮಿ ನೀಡಲಾಗಿದೆ. ಆದರೆ, ಹಕ್ಕುಪತ್ರ ಪಡೆದ ಜನ ಇದುವರೆಗೂ ಖಾತೆ ವಾಡಿಸಿಕೊಂಡಿಲ್ಲ. ಇದರಿಂದಾಗಿ ನರೇಗಾ ಯೋಜನೆಯಲ್ಲಿ ನೀಡುವ ಸಹಾಯಧನ, ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆಯಲು ಇವರಿಗೆ ಸಾಧ್ಯವಾಗುತ್ತಿಲ್ಲ.
ಗ್ರಾಮಸ್ಥರು ವಾಸಿಸುತ್ತಿರುವ ಜಾಗ ಅರಣ್ಯ ಇಲಾಖೆಯದ್ದಾಗಿದ್ದು, ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಹಲವು ವರ್ಷಗಳ ಹಿಂದೆ ವಾನವೀಯತೆ ನೆಲೆಯಲ್ಲಿ ಗ್ರಾಮ ಪಂಚಾಯಿತಿ ವಾಸಕ್ಕೆ ಮನೆಗಳನ್ನು ವಾಡಿಕೊಟ್ಟಿತ್ತು. ಆದರೆ, ಈಗ ದಾಖಲೆಗಳು ಡಿಜಿಟಲೀಕರಣವಾಗಿದ್ದು, ವಸತಿ ಯೋಜನೆಯಲ್ಲಿ ನೆರವಾಗಲು ಮನೆಗಳ ಹಕ್ಕುಪತ್ರವಾಗಲಿ, ಸಂಬಂಧಪಟ್ಟ ದಾಖಲೆಗಳು ಲಭ್ಯವಾಗದ ಕಾರಣ ಮನೆ ನಿರ್ಮಾಣ ಮಾಡಿಕೊಡಲು ಸಾಧ್ಯವಾಗದೆ ಗ್ರಾಪಂ ಕೈಚೆಲ್ಲಿದೆ. ಪಂಚಾಯಿತಿ ವತಿಯಿಂದ ಕೆಲವು ಮನೆಗಳಿಗೆ ಶೌಚಗೃಹ ಕಟ್ಟಿಕೊಳ್ಳಲು ನೆರವು ನೀಡಲಾಗಿದೆ. ಆದರೂ ಕೆಲವರು ಶೌಚಗೃಹ ಕಟ್ಟಿಕೊಳ್ಳದೆ ಈಗಲೂ ಬಯಲು ಬಹಿರ್ದೆಸೆಗೆ ಒಗ್ಗಿಕೊಂಡಿದ್ದಾರೆ.
ಸೋಲಾರ್ ಲೈಟ್: ಕಾಡಂಚಿನ ಈ ಗ್ರಾಮಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಜಿಪಂ, ತಾಪಂ, ಗ್ರಾಪಂ ಮುಂದಾಗಿಲ್ಲ. ಬಿಡದಿ ಟೊಯೋಟಾ ಸಂಸ್ಥೆ ತಾಲೂಕಿನ ಹಲವಾರು ಗ್ರಾಮಗಳಿಗೆ ಸೋಲಾರ್ ದೀಪದ ವ್ಯವಸ್ಥೆ ವಾಡಿದೆ. ಆದರೆ ಇಂತಹ ಸಂಸ್ಥೆಗಳಿಂದ ನೆರವು ಪಡೆಯಲು ಸ್ಥಳೀಯ ಆಡಳಿತ ವಿಲವಾಗಿದೆ.
ಗ್ರಾಮದ ಬಹುಪಾಲು ಜನ ಕೂಲಿ ಮಾಡಿಯೇ ಬದುಕು ಸಾಗಿಸುತ್ತಾರೆ. ಕಾಲನಿ ಜನ ರೇಷ್ಮೆಕೃಷಿ, ತರಕಾರಿ ತೋಟ ನಿರ್ವಹಣೆ, ವಾವಿನ ತೋಟದ ಕಾವಲು, ತೆಂಗಿನ ಮರದಲ್ಲಿ ಕಾಯಿ ಕೀಳುವಿಕೆ, ಸಿಮೆಂಟ್ ಕೆಲಸ ಇತ್ಯಾದಿ ಮೂಲಕ ಜೀವನ ನಿರ್ವಹಿಸುತ್ತಿದ್ದಾರೆ.
ಕಾಲನಿಗೆ ಆಗಬೇಕಿರುವುದೇನು?: ಅಂಗನವಾಡಿ ಕೇಂದ್ರ, ಮನೆಗಳಿಗೆ ಹಕ್ಕುಪತ್ರ, ಸರ್ಕಾರಿ ಬಸ್ ಸೇವೆ, ಗುಡಿಸಲು ಮತ್ತು ಶೀಟಿನ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ, ಸೋಲಾರ್ ಲೈಟಿನ ವ್ಯವಸ್ಥೆ, ಹಕ್ಕುಪತ್ರ ನೀಡಿರುವ ಜಮೀನಿಗೆ ಖಾತೆ ಬದಲಾವಣೆ, ಕೆರೆಗೆ ಸಮರ್ಪಕ ರಸ್ತೆ, ದೇವಸ್ಥಾನದ ಅಭಿವೃದ್ಧಿ, ಸಮುದಾಯ ಭವನ ನಿರ್ವಾಣ, ಯುವಕ/ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗ ವ್ಯವಸ್ಥೆ, ಆಶ್ರಯ ವಸತಿ ನಿವೇಶನ ಮತ್ತು ಮನೆಗಳ ನಿರ್ವಾಣಕ್ಕೆ ಆದ್ಯತೆ, ಶುದ್ಧ ಕುಡಿಯುವ ನೀರಿನ ಟಕ, ಸ್ವಚ್ಛತೆ ಅರಿವು ಕಾರ್ಯಕ್ರಮ, ಶೌಚಗೃಹ ನಿರ್ಮಾಣ.
ಶಿಕ್ಷಣ ಮರೀಚಿಕೆ: ಗ್ರಾಮದ ಒಬ್ಬ ವಿದ್ಯಾರ್ಥಿನಿ, ಇಬ್ಬರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಕಲಿಯುತ್ತಿದ್ದಾರೆ. ಬಹುಪಾಲು ಮಕ್ಕಳು 5ರಿಂದ 8ನೇ ತರಗತಿಗೆ ಸೀಮಿತವಾಗಿದ್ದಾರೆ. ಗ್ರಾಮದ ರಸ್ತೆ ಡಾಂಬರು ಕಂಡಿದ್ದರೂ ಯಾವುದೇ ಸರ್ಕಾರಿ ಅಥವಾ ಖಾಸಗಿ ವಾಹನಗಳ ಸಂಪರ್ಕ ಇಲ್ಲವಾಗಿದೆ. 2 ಕಿ.ಮೀ. ದೂರದ ದಾಸೇಗೌಡನದೊಡ್ಡಿ ಮೂಲಕ ಹುಣಸನಹಳ್ಳಿ - ತುಂಬೇನಹಳ್ಳಿ ರಸ್ತೆಗೆ ಕಾಲ್ನಡಿಗೆಯಲ್ಲೇ ಸಾಗಬೇಕು. ಕಾಡುಪ್ರಾಣಿಗಳ ಕಾಟದ ನಡುವೆಯೂ ಓಡಾಡುವುದು ಅನಿವಾರ್ಯವಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಪಂ ಅಧಿಕಾರಿಗಳು ಗ್ರಾಮದ ಬಗ್ಗೆ ಗಮನ ಹರಿಸಿ ಜನರ ಹಾಗೂ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
33 ಮಕ್ಕಳಿಗೆ ಒಬ್ಬರೇ ಶಿಕ್ಷಕರು ಗ್ರಾಮದಲ್ಲಿ 1ರಿಂದ 5ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಶಿಕ್ಷಕ ಟಿ.ಸಿ.ಚಂದ್ರಯ್ಯ ಶ್ರಮದಿಂದ ಶಾಲೆ ಚೊಕ್ಕವಾಗಿದೆ. ಶಾಲಾ ಆವರಣ, ಬಿಸಿಯೂಟ, ಶುಚಿತ್ವ, ಶಾಲಾ ಪರಿಸರ, ತರಕಾರಿ ತೋಟ, ತೆಂಗಿನ ಮರಗಳ ನಿರ್ವಹಣೆ ತೃಪ್ತಿ ನೀಡುತ್ತವೆ. ಆದರೆ ಇಲ್ಲಿ ಕಲಿಯುತ್ತಿರುವ 33 ಮಕ್ಕಳಿಗೆ ಇರುವುದು ಒಬ್ಬರೇ ಶಿಕ್ಷಕರು. ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಪ್ರಮುಖವಾಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಬೇಕಿದೆ. ಈ ಬಗ್ಗೆ ಜಿಪಂ ಅಧಿಕಾರಿಗಳ ಗಮನ ಸೆಳೆದಿದ್ದು, ಶೀಘ್ರವಾಗಿ ಅಂಗನವಾಡಿ ಕೇಂದ್ರ ತೆರೆಯುವ ಭರವಸೆ ನೀಡಿದ್ದಾರೆ. ಬೈರೇಗೌಡ, ಗ್ರಾಪಂ ಸದಸ್ಯ ದಾಸೇಗೌಡನದೊಡ್ಡಿ *** ಇರುಳಿಗರ ಕಾಲನಿ ಗ್ರಾಮ ಅರಣ್ಯ ಪ್ರದೇಶದಲ್ಲಿದೆ. ಅವರು ವಾಸಿಸುವ ಜಾಗಕ್ಕೆ ಹಕ್ಕುಪತ್ರ ದಾಖಲೆಗಳು ಇಲ್ಲದ ಕಾರಣ ಆಶ್ರಯ ಯೋಜನೆಯಲ್ಲಿ ವಸತಿ ನೀಡಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ವತಿಯಿಂದ ಶೌಚಗೃಹ, ಬೀದಿದೀಪ, ಚರಂಡಿ, ನೀರಿನ ವ್ಯವಸ್ಥೆ ಸೇರಿ ಮೂಲಸೌಲಭ್ಯ ಕಲ್ಪಿಸಲಾಗಿದೆ. ಬಿ.ಪಿ.ಕುವಾರ್, ಪಿಡಿಒ, ಹುಣಸನಹಳ್ಳಿ ಗ್ರಾಪಂ *** ಸೌದೆ ಮಾರಿ ಜೀವನ ನಡೆಸುತ್ತಿದ್ದೇವೆ. ಅನಕ್ಷರಸ್ಥರೇ ಹೆಚ್ಚಾಗಿರುವ ಕಾರಣ ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ. ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಇಂದೋ ನಾಳೆಯೋ ಮನೆಗಳು ಬೀಳುವ ಹಂತದಲ್ಲಿವೆ. ಜಮೀನಿಗೆ ಹಕ್ಕುಪತ್ರ ನೀಡಿದ್ದರೂ ಸಮರ್ಪಕ ದಾಖಲೆಗಳನ್ನು ನೀಡಿಲ್ಲ. ಮುರಿದ ಮನೆಗಳಲ್ಲೇ ಜೀವನ ಸಾಗಿಸಬೇಕಿದೆ. ಚಿಕ್ಕತಾಯಮ್ಮ, ಇರುಳಿಗರ ಕಾಲನಿ