ಕೊಳ್ಳೇಗಾಲ: ತಾಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 948ರ ಬೈಪಾಸ್‌ನಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಬೆಳಗದೆ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ.
ಜಿಲ್ಲೆಯೊಳಗೆ ಸುಮಾರು 67 ಕಿ.ಮೀ. ಈ ಹೆದ್ದಾರಿ ಹಾದು ಹೋಗಲಿದ್ದು, ಹಲವು ಗ್ರಾಮಗಳ ಬಳಿ ಜಂಕ್ಷನ್‌ಗಳು ನಿರ್ಮಾಣವಾಗಿವೆ. ಈಗಾಗಲೆ ಹೆದ್ದಾರಿ ರಸ್ತೆಯಲ್ಲಿ ವಾಹನಗಳ ಸಂಚಾರ ಆರಂಭವಾಗಿ ಹಲವು ತಿಂಗಳಾದರೂ ಈ ಜಂಕ್ಷನ್‌ನಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಬೆಳಗಾದ ಕಾರಣ ಅಪಘಾತಗಳು ಸಂಭವಿಸುತ್ತಿವೆ.
ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಸತ್ತೇಗಾಲ ಜಂಕ್ಷನ್, ಹ್ಯಾಂಡ್‌ಪೋಸ್ಟ್ ಜಂಕ್ಷನ್, ನರೀಪುರ ಜಂಕ್ಷನ್, ಉತ್ತಂಬಳ್ಳಿ ಜಂಕ್ಷನ್ ಹೀಗೆ ಇನ್ನಿತರ ಜಂಕ್ಷನ್‌ಗಳಿದ್ದು, ಇಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ನಿರಂತರವಾಗಿ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸಿದ್ದರಿಂದ ಜನರು ಭಯಭೀತರಾಗಿದ್ದರು. ಸತ್ತೇಗಾಲ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿ ಸಂಬಂಧಿಸಿದವರಿಗೆ ಪತ್ರ ಬರೆದು ಸತ್ತೇಗಾಲ ಮತ್ತು ಹ್ಯಾಂಡ್‌ಪೋಸ್ಟ್ ನಡುವೆ ಹಾದು ಹೋಗಿರುವ ಜಂಕ್ಷನ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಹಾಗಾಗಿ ಸಂಸದ ಸುನೀಲ್ ಬೋಸ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಎನ್‌ಎಚ್‌ಐ ಅಧಿಕಾರಿಗಳ ಜತೆ ಖುದ್ದು ಸ್ಥಳಕ್ಕೆ ಭೇಟಿ ಗ್ರಾಮಸ್ಥರ ಮನವಿ ಆಲಿಸಿದ್ದರು.
ಹೆದ್ದಾರಿ ಬೈಪಾಸ್‌ನಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳ ಬಗ್ಗೆ ಜನರು ಗಮನ ಸೆಳೆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸತ್ತೇಗಾಲ ಜಂಕ್ಷನ್ ನಲ್ಲಿ ರಸ್ತೆ ಹುಬ್ಬುಗಳು ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸಿದ್ದಾರೆ. ದೀಪಗಳನ್ನು ಅಳವಡಿಸಿ 3-4 ತಿಂಗಳಾದರೂ ಬೆಳಕಿನ ಸೇವೆ ಸಿಗುತ್ತಿಲ್ಲ. ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ.
ಸಂಸದರ ಸೂಚನೆಗೂ ಕಿಮ್ಮತ್ತಿಲ್ಲ: ಸತ್ತೇಗಾಲ ಹೆದ್ದಾರಿ ಬೈಪಾಸ್ ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ, ಕಳೆದ ಆ.14ರಂದು ಸಂಸದ ಸುನೀಲ್ ಬೋಸ್, ಮಾಜಿ ಶಾಸಕ ಆರ್.ನರೇಂದ್ರ ಅವರು ಬೈಪಾಸ್ ಕಾಮಗಾರಿ ವೀಕ್ಷಣೆ ಮಾಡಿದ ವೇಳೆ ಗ್ರಾಮಸ್ಥರು ಜಂಕ್ಷನ್‌ನಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಉರಿಯುತ್ತಿಲ್ಲ, ರಸ್ತೆ ಹುಬ್ಬುಗಳು ಕಳಪೆಯಾಗಿದೆ ಎಂದು ದೂರಿ ಎನ್‌ಎಚ್‌ಐ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ಈಗಾಗಲೇ ಸತ್ತೇಗಾಲ ವ್ಯಾಪ್ತಿಯಲ್ಲಿ ಅಪಘಾತದಿಂದ 6-7 ಸಾವುಗಳು ಸಂಭವಿಸಿದೆ. ಅಪಘಾತಗಳ ತಡೆಗೆ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವ ಪ್ರಕ್ರಿಯೆ ಜರೂರಾಗಿ ನಡೆಯಬೇಕು. ವಿದ್ಯುತ್ ದೀಪಗಳು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಎನ್‌ಎಚ್‌ಐ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದರೂ ಇನ್ನು ದೀಪಗಳು ಬೆಳಗುತ್ತಿಲ್ಲ. ಸಂಸದರ ಸೂಚನೆಗೂ ಕಿಮ್ಮತ್ತು ಸಿಗುತ್ತಿಲ್ಲ.
ರಾತ್ರಿ ಸಂಚಾರ ಅಪಾಯ: ಬೈಪಾಸ್ ಹೆದ್ದಾರಿ ಜಂಕ್ಷನ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಸಂಚಾರ ಕಷ್ಟಕರವಾಗಿದೆ. ಸತ್ತೇಗಾಲ, ಹ್ಯಾಂಡ್‌ಪೋಸ್ಟ್, ನರೀಪುರ, ಉತ್ತಂಬಳ್ಳಿ ಇನ್ನಿತರ ಜಂಕ್ಷನ್‌ಗಳಲ್ಲಿ ಬೆಳಕಿಲ್ಲದೆ ವಾಹನ ಸವಾರರು ಪರದಾಡುತ್ತಿದ್ದಾರೆ. ವೇಗವಾಗಿ ಚಲಿಸುವ ವಾಹನಗಳ ನಿಯಂತ್ರಣಕ್ಕೆ ಹಾಗೂ ಅಪಘಾತ ತಡೆಗೆ ಸತ್ತೇಗಾಲ ಮತ್ತು ಹ್ಯಾಂಡ್‌ಪೋಸ್ಟ್ ಬೈಪಾಸ್ ಜಂಕ್ಷನ್‌ನಲ್ಲಿ ಹಾಕಿರುವ ರಸ್ತೆ ಡುಬ್ಬಗಳು ರಾತ್ರಿ ವೇಳೆ ವಾಹನ ಸವಾರರಿಗೆ ತಕ್ಷಣಕ್ಕೆ ಗೋಚರಿಸದ ಕಾರಣ ಅಪಘಾತಕ್ಕೀಡಾಗಿ ಗಾಯಗೊಳ್ಳುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಹೆದ್ದಾರಿ ಜಂಕ್ಷನ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸತ್ತೇಗಾಲ ಬೈಪಾಸ್ ಜಂಕ್ಷನ್‌ನಲ್ಲಿ 2-3 ತಿಂಗಳ ಹಿಂದೆಯೇ ವಿದ್ಯುತ್ ಕಂಬಗಳನ್ನು ನೆಪ ಮಾತ್ರಕ್ಕೆ ಅಳವಡಿಸಲಾಗಿದೆ. ಆದರೆ ವಾಹನ ಸವಾರರಿಗೆ ಬೆಳಕಿನ ವ್ಯವಸ್ಥೆ ಇಲ್ಲ. ಕಗ್ಗತ್ತಲ್ಲಲ್ಲೇ ಸಂಚಾರ ಮಾಡಬೇಕಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ತಕ್ಷಣಕ್ಕೆ ರಸ್ತೆ ಡುಬ್ಬಗಳು ಗೋಚರಿಸದೆ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ ವೇಳೆ ಜಂಕ್ಷನ್ ದಾಟುವಾಗ ಸಾರ್ವಜನಿಕರು ಜೀವಭಯದಲ್ಲಿ ಸಂಚರಿಸಬೇಕಿದೆ. ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ಸತ್ತೇಗಾಲ ಗ್ರಾಮ ಹೆದ್ದಾರಿ ಬೈಪಾಸ್ ಜಂಕ್ಷನ್‌ಗಳಲ್ಲಿ ವಿದ್ಯುತ್ ದೀಪ ಬೆಳಗದಿರುವುದು ಗಮನದಲ್ಲಿದೆ. ಸದ್ಯದಲ್ಲಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಭೆಯಲ್ಲಿ ಗಮನ ಸೆಳೆಯುತ್ತೇನೆ. ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಲು ಗ್ರಾಮ ಪಂಚಾಯಿತಿ ಕ್ರಮ ವಹಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮನವಿ ಮಾಡಲಾಗುತ್ತದೆ. ದಿನೇಶ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ, ಕೊಳ್ಳೇಗಾಲ