ಕಣ್ಮನ ಸೆಳೆಯುತ್ತಿವೆ ವೈವಿಧ್ಯಮಯ ಚಿತ್ರಗಳು

09b81350-aa5a-42ec-ba70-0c89f5ce5d44
Published on

ಅವಿನಾಶ್ ಜೈನಹಳ್ಳಿ ಮೈಸೂರು

ಸುಡು ಬಿಸಿಲಿನಲ್ಲೇ ನವಿಲುಗಳು ಗರಿ ಬಿಚ್ಚಿ ನರ್ತಿಸುತ್ತಿತ್ತು. ಹುಲಿರಾಯ ಗರ್ಜಿಸುತ್ತಿದ್ದರೆ ಕಾಡಾನೆಗಳು ಘೀಳಿಡುತ್ತಿದ್ದವು. ಅಷ್ಟೇ ಅಲ್ಲ! ಗಿಡ, ಬಳ್ಳಿ, ಹಸಿರು ಮರಗಳು ಕಣ್ಣಿಗೆ ತಂಪೆರೆಯುತ್ತಿದ್ದವು. ಒಟ್ಟಿನಲ್ಲಿ ವಿಶಿಷ್ಟ ಚಿತ್ರ ಚಿತ್ತಾರಗಳ ಲೋಕ ಕಣ್ಮನ ಸೆಳೆಯುತ್ತಿದೆ..!

ಇದು ಯಾವುದೋ ವಿಹಾರ ತಾಣದ ವರ್ಣನೆ ಅಲ್ಲ. ಚಿಣ್ಣರ ಕಲಾಕುಂಚದಲ್ಲಿ ಸೃಷ್ಟಿಯಾದ ಕಲಾ ಜಗತ್ತಿನ ಝಲಕ್. ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದ ಬಾಲಜಗತ್ ಶಾಲಾ ಆವರಣದಲ್ಲಿ ನಡೆಯುತ್ತಿರುವ ಚಿತ್ರಕಲಾ ತರಬೇತಿ ಶಿಬಿರದಲ್ಲಿ ಕಲಿಯುತ್ತಿರುವ ಮಕ್ಕಳು ರಚಿಸಿದ ವೈವಿಧ್ಯಮಯ ಚಿತ್ರ ಲೋಕವಿದು.

ಜೆಎಸ್‌ಎಸ್ ಮಹಾವಿದ್ಯಾಪೀಠವು ಶಾಲಾ ಮಕ್ಕಳಿಗಾಗಿ ಏ.22ರವರೆಗೆ ಚಿತ್ರಕಲಾ ಶಿಬಿರ ಆಯೋಜಿಸಿದ್ದು, ಶಿಬಿರದಲ್ಲಿ 85 ಮಕ್ಕಳು ಭಾಗವಹಿಸಿದ್ದಾರೆ. ಪ್ರತಿನಿತ್ಯ ವಿಭಿನ್ನ ಚಿತ್ರಗಳನ್ನು ರಚಿಸುವುದನ್ನು ಕಲಿಯುವುದರ ಜತೆಗೆ ಕಲಿತ ಎಲ್ಲ ಚಿತ್ರಗಳನ್ನು ಶಿಕ್ಷಕರು ಬೆರಗಾಗುವ ರೀತಿ ರಚಿಸುತ್ತಿದ್ದಾರೆ.

ಶನಿವಾರ ಶಿಬಿರದಲ್ಲಿ ಭಾಗವಹಿಸಿದ್ದ ನಾಗರತ್ನ, ಯಶ್ಮಿತ್, ದೈವಿ ಸೇರಿದಂತೆ ಇತರರು ನೀರಿನಲ್ಲಿ ತೇಲುವ ಬೋಟ್ ಸೇರಿದಂತೆ ಭೂಮಿ, ಮರ, ಗಿಡ, ಮಳೆ, ಬೆಟ್ಟ, ಗುಡ್ಡ ಸೇರಿದಂತೆ ಸಮತೋಲನ ಪ್ರಕೃತಿಯ ಚಿತ್ರ ಬಿಡಿಸಿದ್ದರು. ಅವಳ ಪಕ್ಕದಲ್ಲೇ ಕುಳಿತಿದ್ದ ಪವನ್, ಪ್ರೀತಂ, ತರುಣ್ ಕಾಟೂನ್ ಜತೆಗೆ ಬೃಹತ್ ಆಲದ ಮರ ಬಿಡಿಸುವ ಮೂಲಕ ಹಸಿರು ಬಣ್ಣವನ್ನು ತುಂಬುತ್ತಿದ್ದರು. ರಾಜವರ್ಧನ್, ಅನ್ವಿತ್. ಅದ್ವಿತ್ ವಿ.ರಾವ್, ಆಕಾಶ್ ಸೇರಿದಂತೆ ಇತರರು ಪೋಕಿಮನ್ ಸೇರಿದಂತೆ ಹಾರುವ ಹಕ್ಕಿ, ಜಿಂಕೆ ಚಿತ್ರ ಮತ್ತು ನೈಸರ್ಗಿಕ ಚಿತ್ರಗಳನ್ನು ರಚಿಸಿ ಭೇಷ್ ಎನಿಸಿಕೊಂಡರು.

ಶಿಬಿರದಲ್ಲಿ ಸತತವಾಗಿ ಭಾಗಿಯಾಗುತ್ತಿರುವ ಯಾನಿಕಾ, ಜ್ವಾಲ ಅನುಷ್ಕಾ ಮಂಡಲ್ ಆರ್ಟ್, ವೈವಿಧ್ಯಮಯ ಜಲವರ್ಣ, ಪೆನ್ಸಿಲ್ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದಳು. ಇತರ ಮಕ್ಕಳು ನಾನಾ ಬಗೆಯ ಪ್ರಾಣಿಗಳನ್ನು ಚಿತ್ರಿಸಿದ್ದರು. ಇನ್ನಿಬ್ಬರು ಸೇಬಿನಹಣ್ಣು ರಚಿಸಿ ಗಮನ ಸೆಳೆದರು. ಉಳಿದವರು ವರ್ಣಮಯ ಚಿತ್ರ ರಚಿಸಿ ಖುಷಿ ಪಡುತ್ತಿದ್ದರು.

ಮೂರು ವಿಭಾಗ

ಶಿಬಿರದಲ್ಲಿ ಯು ಕೆಜಿ ಇಂದ 4ನೇ ತರಗತಿವರೆಗೆ, 5 ರಿಂದ 7ನೇ ತರಗತಿವರೆಗೆ, 8 ರಿಂದ 10ನೇ ತರಗತಿ ಮಕ್ಕಳನ್ನು ಪ್ರತ್ಯೇಕವಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಿ, 8 ಕಲಾವಿದರು ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ ತರಬೇತಿ ನೀಡುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಶಿಬಿರ ಮಧ್ಯಾಹ್ನ 1 ಗಂಟೆವರೆಗೂ ನಡೆಯುತ್ತದೆ. ಚಿತ್ರಕಲೆ ತರಬೇತಿಗೂ ಮುನ್ನ ಅರ್ಧಗಂಟೆ ಕಾಲ ಪ್ರಾರ್ಥನೆ ಮಾಡಿಸುವ ಜತೆಗೆ ಆಧ್ಯಾತ್ಮಕತೆಯನ್ನು ಕಲಿಸಲಾಗುತ್ತದೆ. ಜೆಎಸ್‌ಎಸ್ ಮಹಾವಿದ್ಯಾಪೀಠವೂ 16 ವರ್ಷಗಳಿಂದ ಬಾಲಜಗತ್ ಶಾಲಾ ಆವರಣದಲ್ಲಿ ಶಿಬಿರವನ್ನು ಆಯೋಜಿಸುತ್ತಿದೆ.

ಹೊರಂಗಾಣ ಪ್ರವಾಸ

ಶಿಬಿರದಲ್ಲಿ ಒಂದು ದಿನ ನಿಸರ್ಗ ಚಿತ್ರ ರಚನೆ ಸಲುವಾಗಿ ಏ.19ರಂದು ಹೊರಾಂಗಣ ಪ್ರವಾಸ ಏರ್ಪಡಿಸಲಾಗಿದೆ. ಅಂದು ಶಿಬಿರದ ಮಕ್ಕಳನ್ನು ಯಾವುದಾದರೂ ಒಂದು ಪ್ರಮುಖ ಪ್ರವಾಸಿ ಕ್ಷೇತ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನಿಸರ್ಗ ಚಿತ್ರ ಬಿಡಿಸುವುದನ್ನು ಪರಿಚಯಿಸಲಾಗುತ್ತದೆ. ಬಳಿಕ ಅಂದು ಮಧ್ಯಾಹ್ನ 1 ಗಂಟೆ ಸುತ್ತೂರಿಗೆ ಕರೆದೊಯ್ಯಲಾಗುತ್ತದೆ. ನಿಸರ್ಗ ಚಿತ್ರರಚನೆ ಜತೆಗೆ ಗ್ರಾಮೀಣ ಸೊಗಡನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಶಿಬಿರ ಸಂಚಾಲಕ ಎಸ್.ಎಂ.ಜಂಬುಕೇಶ್ವರ.

ಚಿತ್ರಕಲೆಗಳ ಪ್ರದರ್ಶನ

ಶಿಬಿರದಲ್ಲಿ ಮಕ್ಕಳು ರಚಿಸುವ ಉತ್ತಮ ಚಿತ್ರಗಳನ್ನು ಏ.22ರಂದು ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶನಗೊಳ್ಳುವ ಮಕ್ಕಳ ಚಿತ್ರಗಳನ್ನು ಸಾರ್ವಜನಿಕರೂ ವೀಕ್ಷಿಸಬಹುದಾಗಿದೆ. ಮಕ್ಕಳು ರಚಿಸಿದ ಉತ್ತಮ ಚಿತ್ರಗಳಿಗೆ ಬಹುಮಾನ ಹಾಗೂ ಅರ್ಹತಾ ಪತ್ರ ವಿತರಿಸಲಾಗುತ್ತದೆ. ಮೂರು ವಿಭಾಗದಲ್ಲಿ ತಲಾ ಮೂರು ಮಕ್ಕಳಿಗೆ ಬಹುಮಾನ ದೊರೆಯಲಿದೆ.

ನಗರದ ಚಿತ್ರಕಲಾ ಸಂಘದ ವತಿಯಿಂದ 1982ರಂದು ಜೆಎಸ್‌ಎಸ್ ಬಾಲಜಗತ್ ಶಾಲಾ ಆವರಣದಲ್ಲಿ ಶುರುವಾಗಿ ಐದು ವರ್ಷ ನಿರಂತರವಾಗಿ ನಡೆಯಿತು. ಕಾರಣಾಂತರಗಳಿಂದ ಈ ಶಿಬಿರ ನಿಂತು ಹೋಯಿತು. ಇದನ್ನು ಗಮನಿಸಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಧಾರ್ಮಿಕ ದತ್ತಿಯ ಮೂಲಕ ಇದನ್ನು ಮುಂದುವರಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ 2006ರಲ್ಲಿ ಮತ್ತೆ ಶಿಬಿರ ಪ್ರಾರಂಭವಾಯಿತು. ಈ ಶಿಬಿರವು ಮಕ್ಕಳ ಪ್ರತಿಭಾ ಅನಾವರಣಕ್ಕೆ ಸೃಜನಶೀಲ ವೇದಿಕೆಯಾಗಿದೆ. ಹಾಗಾಗಿ 20 ಮಕ್ಕಳೊಂದಿಗೆ ಶುರುವಾದ ಶಿಬಿರದಲ್ಲಿ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಹೋಗುತ್ತಿದೆ. ಈವರೆಗೆ ಸಾವಿರಕ್ಕೂ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಚಿತ್ರಕಲೆಯನ್ನು ಕಲಿತ್ತಿದ್ದಾರೆ. ಮಕ್ಕಳ ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದಾರೆ.

ಚಿತ್ರಕಲಾ ಶಿಬಿರದ ಸಂಚಾಲಕ ಎಸ್.ಎಂ.ಜಂಬುಕೇಶ್ವರ ಅವರ ಮಾರ್ಗದರ್ಶನದಲ್ಲಿ ಶಲಭಣ್ಣವರ್, ಡಿ.ಎಸ್.ನಾಗರಾಜಪ್ಪ, ಬಿ.ಎಂ.ಕೆರೂರ, ಶೋಭಾ, ವೆಂಕಟರಾಜು ಮತ್ತು ನಾಗೇಂದ್ರ, ಅಲ್ಲಾಸಾಬ್ ಗಡಾದ್ ಇತರರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಜೆಎಸ್‌ಎಸ್ ಮಹಾವಿದ್ಯಾಪೀಠವು ಶಾಲಾ ಮಕ್ಕಳಿಗಾಗಿ ಏ.22ರವರೆಗೆ ಚಿತ್ರಕಲಾ ಶಿಬಿರ ಆಯೋಜಿಸಿದ್ದು, ಶಿಬಿರದಲ್ಲಿ 85 ಮಕ್ಕಳು ಭಾಗವಹಿಸಿದ್ದಾರೆ. ಪ್ರತಿನಿತ್ಯ ವಿಭಿನ್ನ ಚಿತ್ರಗಳನ್ನು ರಚಿಸುವುದನ್ನು ಕಲಿಯುವುದರ ಜತೆಗೆ ಕಲಿತ ಎಲ್ಲ ಚಿತ್ರಗಳನ್ನು ಶಿಕ್ಷಕರು ಕಲಿಸುತ್ತಿದ್ದಾರೆ. ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಮಕ್ಕಳಲ್ಲಿರುವ ಕಲಾಸಕ್ತಿ ಗುರುತಿಸಿ ಪಾಲಕರು ಇಂತಹ ಶಿಬಿರಕ್ಕೆ ಸೇರಿಸುತ್ತಿರುವುದು ಸಂತಸವಾಗುತ್ತದೆ. ಎಸ್.ಎಂ.ಜಂಬುಕೇಶ್ವರ ಚಿತ್ರಕಲಾ ಶಿಬಿರದ ಸಂಚಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net