ಕಣ್ಮನ ಸೆಳೆಯುತ್ತಿದೆ ಕಪಿಲತೀರ್ಥ ಜಲಪಾತ

22 hsr 01
ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತದ ಮೈದುಂಬಿ ಹರಿಯುತ್ತಿರುವುದು.
Published on

ಹನುಮಸಾಗರ: ಸಮೀಪದ ಕಬ್ಬರಗಿ ಗ್ರಾಮದ ಬಳಿಯ ಕಪಿಲತೀರ್ಥ ಜಲಪಾತ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ.

ಮಿನಿ ಜೋಗ ಎಂದು ಪ್ರಸಿದ್ಧಿ ಹೊಂದಿದ ಕಪಿಲತೀರ್ಥ ಜಲಪಾತ, ಕಲ್ಯಾಣ ಕರ್ನಾಟಕದ ಏಕೈಕ ಜಲಪಾತವಾಗಿದೆ. ಹನುಮಸಾಗರದಿಂದ 11 ಕಿ.ಮೀ. ದೂರದಲ್ಲಿರುವ ಈ ಜಲಪಾತವಿದ್ದು, ಕಬ್ಬರಗಿ ಗ್ರಾಮದ ವರೆಗೆ ಮಾತ್ರ ಬಸ್‌ಗಳು ಬರುತ್ತಿದ್ದು, ಇನ್ನುಳಿದ 3ಕಿ.ಮೀ.ವರೆಗೆ ವಾಹನ ಸೌಕರ್ಯ ಇಲ್ಲ.

ಈ ಮೊದಲು ಜಲಾಶಯ ತಲುಪಲು ಗುಡ್ಡದ ಮಧ್ಯೆ, ಕಲ್ಲು, ಮುಳ್ಳುಗಳನ್ನು ದಾಟಿಕೊಂಡು ಬರಬೇಕಾಗಿತ್ತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಆಗಿನ ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಅರಣ್ಯ ಇಲಾಖೆ ಅಧಿಕಾರಿಗಳ ಮನವೊಲಿಸಿ ಜಲಪಾತಕ್ಕೆ ಡಾಂಬರ್ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಿಸಿದ್ದಾರೆ. ಇದರಿಂದ ಜಲಪಾತ ವೀಕ್ಷಣೆಗೆ ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಕಾಲ್ನಡಿಗೆ ತಪ್ಪಿದ್ದು, ವಾಹನಗಳು ಜಲಪಾತದ ಹತ್ತಿರ ಬರುತ್ತವೆ.

ಸಾವಿರಾರು ಸಂಖ್ಯೆಯಲ್ಲಿ ಆಗಮನ

ಈ ಜಲಪಾತ ಮಳೆಗಾಲದಲ್ಲಿ ಭೋರ್ಗರೆಯುತ್ತಿದ್ದು, 25ಅಡಿ ಬೆಟ್ಟದ ಮೇಲಿನಿಂದ ಬೀಳುವ ನೀರು ಎಂಥಹವರನ್ನಾದರು ತನ್ನತ್ತ ಸೆಳೆಯುತ್ತದೆ. ನೀರು ಬೀಳುವ ದೃಶ್ಯ ವೈಭವ ನೋಡಲು ಮಳೆಗಾಲದಲ್ಲಿ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಐತಿಹಾಸಿಕ ಹಿನ್ನೆಲೆ: ಸದ್ಯ ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಕಪಿಲತೀರ್ಥ ಜಲಪಾತದ ಬಳಿ ಪುರಾತನ ಕಾಲದಲ್ಲಿ ಕಪಿಲ ಮುನಿ ತಪಸ್ಸು ಮಾಡಿದ್ದ ಎಂಬ ಪ್ರತೀತಿ ಇದೆ. ಹೀಗಾಗಿ ಈ ಸ್ಥಳಕ್ಕೆ ಕಪಿಲತೀರ್ಥ ಎನ್ನಲಾಗುತ್ತಿದೆ. ಸ್ಥಳೀಯರು ಇದನ್ನು ಕಪಲೆಪ್ಪನ ದಿಡಗು ಎಂದು ಸಹ ಕರೆಯುತ್ತಾರೆ. ಇದೊಂದು ಪಿಕ್‌ನಿಕ್ ಸ್ಪಾಟ್ ಆಗಿದ್ದು, ಬಂದ ಜನ ನೀರಿನಲ್ಲಿ ಇಳಿದು ಮೇಲಿಂದ ಧುಮ್ಮಿಕ್ಕುವ ನೀರಿಗೆ ತಮ್ಮ ಮೈಯೊಡ್ಡಿ ಮೈ-ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಜಲಪಾತ ಧುಮ್ಮಿುಕ್ಕುತ್ತಿರುವ ಹತ್ತಿರದವರೆಗೂ ಜನರಿಗೆ ಹೋಗಲು ಅವಕಾಶ ಇರುವುದರಿಂದ ಪ್ರವಾಸಿಗರ ನೆಚ್ಚಿನ ತಾಣ ಇದಾಗಿದೆ.

ಮೋಜುಮಸ್ತಿ ತಾಣ: ಇಲ್ಲಿಗೆ ಬರುವ ಬಹಳಷ್ಟು ಪ್ರವಾಸಿಗರು ಇಲ್ಲಿಯೇ ಮದ್ಯ, ಧೂಮಪಾನ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಮದ್ಯದ ಬಾಟಲಿ, ಸಿಗರೇಟ್ ತುಂಡುಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಸಾಕ್ಷಿಯಾಗಿವೆ. ಪ್ರವಾಸಿಗರು ನಾವು ಇಲ್ಲಿಗೆ ಕುಡಿದು, ತಿಂದು, ಮಜಾ ಮಾಡಲು ಬರುತ್ತೇವೆಂದು ನಶೆಯಲ್ಲಿ ಹೇಳುತ್ತಾರೆ.

ಸೌಕರ್ಯ ಕೊರತೆ: ಈ ಭಾಗದಲ್ಲಿ ಉತ್ತಮ ಮಳೆಯಾದರೆ, ಈ ಜಲಪಾತದಲ್ಲಿ ನೀರು ಭೋರ್ಗರೆದು ಬೀಳಲು ಪ್ರಾರಂಭವಾಗಿ ಜನರು ತಂಡೋಪ ತಂಡವಾಗಿ, ಕುಟುಂಬ ಸಮೇತವಾಗಿ ಬರುತ್ತಾರೆ. ಆದರೆ, ಇಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯದ ಸಮಸ್ಯೆ ಕಾಡುತ್ತಿದೆ. ಜಲಪಾತಕ್ಕೆ ಇತ್ತೀಚೆಗೆ ರಸ್ತೆ ವ್ಯವಸ್ಥೆ ಮಾಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ದೂರದ ಊರಿಂದ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯ, ಊಟ ಮತ್ತು ಉಪಾಹಾರಕ್ಕಾಗಿ ಯಾವುದೇ ಹೋಟೆಲ್‌ಗಳಿಲ್ಲ. ಶೌಚಗೃಹ ವ್ಯವಸ್ಥೆ ಇಲ್ಲ. ಊಟದ ಕೊಠಡಿಗಳಿಲ್ಲ. ಗುಡ್ಡದಿಂದ ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳಿಲ್ಲ. ಕಲ್ಲುಗಳನ್ನು ದಾಟಿಕೊಂಡು ಬರಬೇಕು. ಇದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.

ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಯ ಜನರು ಜಲಪಾತದ ಸುತ್ತ್ತಲಿನ ಅರಣ್ಯ ಪ್ರದೇಶಗಳಲ್ಲಿ ಅಡುಗೆ ತಯಾರಿಸಿ ಊಟ ಮಾಡುತ್ತಾರೆ. ಅಲ್ಲಿಯೇ ಪ್ಲೇಟ್, ಪ್ಲಾಸ್ಟಿಕ್‌ಗಳನ್ನು ಬಿಟ್ಟು ಹೋಗುತ್ತಿದ್ದು, ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಸ್ವಚ್ಛತೆ ಎಂಬುದು ಮಾಯವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಡುಗೆ ತಯಾರಿಸಲು, ಕುಳಿತು ಊಟ ಮಾಡಲು ವಿಶಾಲವಾದ ಕೊಠಡಿ ವ್ಯವಸ್ಥೆ ಕಲ್ಪಿಸಬೇಕಿದೆ. ಜಲಪಾತಕ್ಕೆ ಹತ್ತಿ ಇಳಿಯಲು ಮೆಟ್ಟಿಲು ನಿರ್ಮಾಣ ಮಾಡಬೇಕಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಮೂಲ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಜನರ ಒತ್ತಾಸೆಯಾಗಿದೆ.

ಕಪಿಲತೀರ್ಥ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಲಪಾತದ ಜನಪ್ರಿಯತೆ ಕಡಿಮೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಪ್ರವಾಸಿತಾಣದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸುರೇಶ ಕೆ. ಹೊಸಮನಿ ಕಬ್ಬರಗಿ ಗ್ರಾಮಸ್ಥ ಕಪಿಲತೀರ್ಥ ಜಲಪಾತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾವ್ಯಾ ಚತುರ್ವೇದಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net