

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಿರುವ ಕೃಷಿ ಮೇಳದ 2ನೇ ದಿನವಾದ ಭಾನುವಾರ ನಡೆಸಿದ ಶ್ವಾನ ಪ್ರದರ್ಶನ ಮೇಳಕ್ಕೆ ಸಾಕಷ್ಟು ಮೆರಗು ನೀಡಿದ್ದು, ಒಂದಕ್ಕಿಂತ ಒಂದು ಶ್ವಾನಗಳು ನೋಡುಗರನ್ನು ಆಕರ್ಷಿಸಿದವು.
ಪ್ರದರ್ಶನಕ್ಕೆ ಆಗಮಿಸಿದ್ದ ದೇಶ, ವಿದೇಶ ತಳಿಗಳನ್ನು ಜನರು ವೀಕ್ಷಣೆ ನಡೆಸಿ ಮೊಬೈಲ್‌ನಲ್ಲಿ ಅವುಗಳ ಭಾವಚಿತ್ರ ಸರೆ ಹಿಡಿಯುತ್ತಿದ್ದರೆ, ನಿತ್ಯವೂ ಮನೆ ಆವರಣದಲ್ಲಿ ವಾಸವಾಗಿದ್ದ ಶ್ವಾನಗಳು ಇಂದು ಜನಸಾಗರ ಕಂಡು ಬೆಚ್ಚಿಬಿದ್ದು ಬೊಗಳುತ್ತಲಿದ್ದವು. ತಮ್ಮ ಪ್ರೀತಿಯ ಶ್ವಾನಗಳನ್ನು ಸಮಾಧಾನ ಪಡಿಸುವುದೇ ಮಾಲೀಕರಿಗೆ ತಲೆ ನೋವಾಗಿತ್ತು.
ಬೆಳಗ್ಗೆಯಿಂದಲೇ ಅತ್ಯಂತ ಹುರುಪಿನಿಂದ ಪಾಲ್ಗೊಂಡಿದ್ದ ಶ್ವಾನಗಳನ್ನು ಯುವಕರು ಕಾಡಿಸಿ ಕಾಡಿಸಿ ಮಜಾ ಪಡೆಯಿತ್ತಿದ್ದರೆ, ಇನ್ನೂ ಕೆಲವರು ಭಯಂಕರ ರೂಪದ ಶ್ವಾನಗಳನ್ನು ಕಂಡು ಗಾಭರಿಯಿಂದ ಹಿಂದೆ ಸರಿಯುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.
ಶ್ವಾನ ಪ್ರದರ್ಶನದಲ್ಲಿ ಅಮೆರಿಕನ್ ಬುಲ್, ಚೌಚೌ, ಲ್ಯಾರ್ಬಡರ್, ಜರ್ಮನ್‌ಶಫರ್ಡ್, ಪಗ್, ಸೈಬೀರಿಯನ್ ಹಸ್ಕಿ ಸೇರಿ ವಿವಿಧ ತಳಿಯ 21 ತಳಿಗಳ 51 ಶ್ವಾನಗಳು ಪಾಲ್ಗೊಂಡಿದ್ದವು. ಇನ್ನು ಬಾಗಲಕೋಟೆಯ ಮುಧೋಳ ತಾಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನ ಹಾಗೂ ಮಾಹಿತಿ ಕೇಂದ್ರದಿಂದ ತರಲಾಗಿದ್ದ ಮುಧೋಳ ಜಾತಿಯ ಶ್ವಾನಗಳು ಜಾನುವಾರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದವು.