

ಹರಿಹರ: ನಗರದ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನ ಮಠದಲ್ಲಿ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ನಿಮಿತ್ತ ಶನಿವಾರ ಶ್ರದ್ಧಾ, ಭಕ್ತಿಯಿಂದ ರಥೋತ್ಸವ ಜರುಗಿತು.
21 ಅಡಿ ಎತ್ತರದ ಭವ್ಯವಾದ ಅಲಂಕೃತ ರಥವನ್ನು ಭಕ್ತ ಸಮೂಹ ಗೋವಿಂದಾ, ಗೋವಿಂದ ಎಂಬ ಘೋಷಣೆಯೊಂದಿಗೆ ಎಳೆದು ಮಠದ ಸುತ್ತಲೂ ಒಂದು ಸುತ್ತು ಹಾಕಿ ಭಕ್ತಿ ಮೆರೆದರು.
ರಥೋತ್ಸವದ ನಂತರ ಮಹಿಳೆಯರಿಂದ ಕೋಲಾಟ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಂಜೆ 6ರಿಂದ ಭಜನೆ ಹಾಗೂ ಉಮಾ ಭಟ್ ಮತ್ತು ಸಂಗಡಿಗರು ಹಾಗೂ ಮನೋಜವಂ ಭಜನಾ ಮಂಡಳಿಯವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಡೆಯಿತು.
ನಾಡಿನಾದ್ಯಂತ ಉತ್ತಮ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥಿಸಿ ಮಠದಿಂದ ಹೋಮ, ಹವನ ನಡೆಸಲಾಯಿತು.
ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಪ್ರಧಾನ ಅರ್ಚಕ ಪಂ.ವರಹಾಚಾರ್, ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಅಧ್ಯಕ್ಷ ಎ.ಬಿ.ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮಂತರೆಡ್ಡಿ, ಪಿ.ಶ್ರೀನಿವಾಸ್., ವೈ.ಲಕ್ಷ್ಮಣ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.