ಕಣ್ಮನ ಸೆಳೆದ ಪುಷ್ಪ ಲೋಕ

24
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಲ್ಲಿ ಎತ್ತ ನೋಡಿದರೂ ನಾನಾ ಬಣ್ಣಗಳ ಪುಷ್ಪಗಳದ್ದೇ ಲೋಕ…ಎಲ್ಲರನ್ನೂ ಸೆಳೆಯುವ ಬಣ್ಣ ಬಣ್ಣದ ಅಲಂಕಾರಿಕ ಪುಷ್ಪಗಳ ಸಂಗ್ರಹವೇ ಕಣ್ಣಿಗೆ ರಾಚುತ್ತಿದ್ದವು. ಇದರ ಜತೆಗೆ ಆರೋಗ್ಯ ಹಾಗೂ ಸೌಂದರ್ಯ ವರ್ಧಕ ಔಷಧೀಯ ಸಸ್ಯಗಳ ಸಮಾಗಮವಾಗಿತ್ತು.
ಈ ಮನಮೋಹಕ ದೃಶ್ಯಗಳು ಕಂಡು ಬಂದಿದ್ದು ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಶನಿವಾರದಿಂದ ಆರಂಭವಾಗಿರುವ ಕೃಷಿ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ. ಈ ಬಾರಿ ಮತ್ಸೃ ಪ್ರದರ್ಶನ ಇಲ್ಲದೆ, ವಿಸ್ಮಯಕಾರಿ ಕೀಟ ಪ್ರಪಂಚ ಸೃಷ್ಟಿಸಿದ್ದು ವಿಶೇಷವಾಗಿತ್ತು. ಪ್ರದರ್ಶನಕ್ಕೆ ಪ್ರವೇಶಿಸುತ್ತಿದ್ದಂತೆ ಕಲ್ಲಂಗಡಿ, ಕುಂಬಳಕಾಯಿ ಸೇರಿ ತರಾವರಿ ತರಕಾರಿಗಳಿಂದ ತಯಾರಿಸಿದ ಗಣೇಶ, ಈಶ್ವರ ಸ್ವಾಗತ ಕೋರುತ್ತಾರೆ. ಹಾಗೆ ಮುಂದೆ ಸಾಗಿದರೆ ಕಲ್ಲಂಗಡಿಯಲ್ಲಿ ಅರಳಿದ ಸಂಗೊಳ್ಳಿ ರಾಯಣ್ಣ, ಗಾಂಧೀಜಿ, ಸುಭಾಷಚಂದ್ರ ಬೋಸ್, ಹೀಗೆ ವಿವಿಧ ಕ್ಷೇತ್ರಗಳ ಮಹನೀಯರ ಚಿತ್ರಗಳನ್ನು ಕಾಣಬಹುದು.
ಇದರ ಜತೆಗೆ ಕಣ್ಣಿಗೆ ತಂಪು ನೀಡುವ ವಿವಿಧ ತಳಿಯ ಪುಷ್ಪಗಳು, ಅಲಂಕಾರಿ, ಔಷಧಿ, ಸುಗಂಧ ಸಸ್ಯಗಳು ಗಮನ ಸೆಳೆಯುತ್ತಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿರುವ ಸಸ್ಯಗಳಾದ ಕರಿನೆಕ್ಕಿ (ಲಕ್ಕಿ), ಹಿಪ್ಪಲಿ, ಸರ್ಪಗಂಧ, ನಾಗದಾಳಿ ಸೇರಿದಂತೆ ಬಸಳೆ, ಚಕ್ರಮಣಿ, ದಾಸವಾಳ, ನಿಂಬೆ ಹುಲ್ಲು, ಭೃಂಗರಾಜ, ಜಲಬ್ರಾಹ್ಮಿ, ವಿವಿಧ ತಳಿಗಳ 60ಕ್ಕೂ ಹೆಚ್ಚು ಸಸ್ಯಗಳು ಪ್ರದರ್ಶನದಲ್ಲಿವೆ. ಈ ಬಾರಿಯ ಕೃಷಿ ಮೇಳದಲ್ಲಿ ಆರಂಭಿಸಿರುವ ವಿಸ್ಮಯಕಾರಿ ಕೀಟ ಪ್ರಪಂಚ ವಿಶೇಷವಾಗಿತ್ತು. ಕೀಟಗಳ ಜೀವನ, ವೈವಿಧ್ಯತೆ, ಅವುಗಳ ಜೈವಿಕ ಪಾತ್ರ, ಉಪಯೋಗಗಳನ್ನು ತಿಳಿಸುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗಿದೆ. ಜೇನು, ಎರೆಹುಳು, ದಕ್ಷಿಣದ ಪಕ್ಷಿ ರೆಕ್ಕೆ ಚಿಟ್ಟೆ, ಅಪ್ಪರೆ ಕೀಟ, ಕಪ್ಪು ಸೈನಿಕ ನೊಣ, ಸಸ್ಯ ತಿಗಣೆ ಹೀಗೆ ಅಂದಾಜು ಸಾವಿರ ಬಗೆಯ ಕೀಟಗಳ ಮೂಲ ಆಕಾರ ರಚನೆ, ಜೀವನ ಕ್ರಿಯೆ ಮತ್ತು ವೈವಿಧ್ಯತೆ ಮಾಹಿತಿ ಜತೆಗೆ ಯಾವ ಕೀಟದಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net