

ಮಂಜುನಾಥ ಟಿ.ಭೋವಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದಾಗ್ಯೂ ದಸರಾ ವೆಬ್‌ಸೈಟ್ ಇನ್ನೂ ಕಣ್ತೆರೆದಿಲ್ಲ.
ಗಜಪಯಣ ಮುಗಿದು, ಆನೆಗಳು ಅರಮನೆ ಪ್ರವೇಶಿಸಿ, ನಿತ್ಯ ತಾಲೀಮು ನಡೆಸುತ್ತಿವೆ. ಉಪಸಮಿತಿಗಳು ರಚನೆಯಾಗಿ ದಸರಾ ಸಿದ್ಧತೆ ನಿಧಾನ ಗತಿಯಲ್ಲಿ ಸಾಗಿದೆ. ಆದರೆ, ಪ್ರವಾಸಿಗರಿಗೆ, ಜನಸಾಮಾನ್ಯರಿಗೆ ಮಾಹಿತಿ ನೀಡುವ ಅಧಿಕೃತ ದಸರಾ ವೆಬ್‌ಸೈಟ್ ಇನ್ನೂ ಉದ್ಘಾಟನೆಗೊಂಡಿಲ್ಲ. ಇದು ಪ್ರತಿವರ್ಷವೂ ಕಾಣಿಸಿಕೊಳ್ಳುವ ಅಂಟುರೋಗವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಶಾಶ್ವತ ದಸರಾ ವೆಬ್‌ಸೈಟ್ ರಚನೆ ಮಾಡುವುದೊಂದೇ ದಾರಿ.
ಮಂದಗತಿಯಲ್ಲಿ ಸಿದ್ಧತೆ:
ಪ್ರಸಕ್ತ ವರ್ಷದ ದಸರಾ ಮಹೋತ್ಸವಕ್ಕೆ ಸೆ. 26ರಂದು ಚಾಲನೆ ದೊರೆಯಲಿದ್ದು, ಅಕ್ಟೋಬರ್ 5ರಂದು ಜಂಬೂಸವಾರಿ ಮೆರವಣಿಗೆಗೆ ದಿನಾಂಕ ನಿಗದಿಯಾಗಿದೆ. ಕಳೆದ ಎರಡು ವರ್ಷ ಸರಳವಾಗಿ ನಡೆದ ದಸರಾ ಉತ್ಸವವನ್ನು ಈ ಸಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ತಯಾರಿ ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ಇದಕ್ಕೆ ದಸರಾ ವೆಬ್‌ಸೈಟ್ ಇನ್ನೂ ಆರಂಭವಾಗಿಲ್ಲ ಎಂಬುದು ಉತ್ತಮ ನಿದರ್ಶನ.
ನಿಖರ ಮಾಹಿತಿ ದೊರೆಯುತ್ತಿಲ್ಲ:
ಇದು ಆನ್‌ಲೈನ್ ದುನಿಯಾ. ಸಿನಿಮಾ ಟಿಕೆಟ್‌ನಿಂದ ಹಿಡಿದು ಪ್ರತಿಯೊಂದು ಕೆಲಸವೂ ಅಂತರ್ಜಾಲದ ಮೂಲಕವೇ ನಡೆಯುತ್ತದೆ. ಅದಕ್ಕೆ ತಕ್ಕಂತೆ ಜನರು ಹೊಂದಿಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಇಡೀ ಜಗತ್ತನ್ನೇ ಶೋಧಿಸುತ್ತಾರೆ. ಮಿಂಚಿನ ವೇಗದಲ್ಲಿ ಓಡುತ್ತಿರುವ ನವಜಗತ್ತಿಗೆ ಆನ್‌ಲೈನ್ ಇಂಧನವಾಗಿದೆ. ಮಾಹಿತಿ ಪಡೆಯಲು ಇದುವೇ ಸಂಪರ್ಕ ಕೊಂಡಿಯಾಗಿದೆ. ಆದರೆ, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಮೈಸೂರು ಜಿಲ್ಲಾಡಳಿತ ಇನ್ನೂ ದಸರಾ ವೆಬ್‌ಸೈಟ್ ತೆರೆದಿಲ್ಲ. ಇದರಿಂದ ದಸರಾ ಚಟುವಟಿಕೆಗಳು, ಬೆಳವಣಿಗೆಗಳು ಜನಸಾಮಾನ್ಯರಿಗೆ, ಪ್ರವಾಸಿಗರಿಗೆ ದೊರೆಯುತ್ತಿಲ್ಲ. ಇದು ಪ್ರಚಾರ ಕೊರತೆಗೂ ಕಾರಣವಾಗಿದೆ.
ಪ್ರವಾಸ ಸಿದ್ಧತೆಗೆ ಅನುಕೂಲ:
ಜಂಬೂಸವಾರಿ, ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್ ಮೂಲಕ 4- 5 ತಿಂಗಳ ಮುನ್ನವೇ ಪ್ರಕಟಿಸಬೇಕು. ಆಗ ಇದನ್ನು ವೀಕ್ಷಿಸಿ ದೇಶ-ವಿದೇಶದ ಪ್ರವಾಸಿಗರು ದಸರಾ ವೀಕ್ಷಣೆಗಾಗಿ ಪ್ರವಾಸ ಯೋಜನೆ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆದರೆ, ದಸರಾಕ್ಕೆ ಒಂದು ತಿಂಗಳ ಮುನ್ನ ವೆಬ್‌ಸೈಟ್ ಶುರು ಮಾಡಿದರೆ ಅಂತಹ ಪ್ರಯೋಜನವಾಗಲ್ಲ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟವಾಗುತ್ತದೆ ಎಂದು ಹೋಟೆಲ್ ಮಾಲೀಕ ಮಲ್ಲೇಶ್ ತಿಳಿಸಿದರು.
ನಾಡಹಬ್ಬಕ್ಕೆ ಜೀವಕಳೆ:
ಪ್ರತಿ ವರ್ಷವೂ ದಸರಾ ವೆಬ್‌ಸೈಟ್ ಉದ್ಘಾಟನೆಯಾಗುವುದು ದಸರಾಕ್ಕೆ 15-20 ದಿನಗಳ ಮುನ್ನವೇ. ಇದು ದಸರಾಕ್ಕೆ ತಗುಲಿರುವ ನಿರ್ಲಕ್ಷೃದ ರೋಗ. ಇದಕ್ಕೆ ಮದ್ದು ಕಂಡುಹಿಡಿಯಬೇಕಾಗಿದೆ. ಅದಕ್ಕಾಗಿ ಶಾಶ್ವತ ದಸರಾ ಅಂತರ್ಜಾಲವನ್ನು ರಚಿಸಬೇಕು. ದಸರಾ ಮುಗಿದ ತಕ್ಷಣ ಮುಂದಿನ ದಸರಾದ ದಿನಾಂಕ, ಮಾಹಿತಿ ನೀಡುವ ಕೆಲಸ ಆಗಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗುತ್ತದೆ. ಅಲ್ಲದೆ, ದಸರಾಕ್ಕೆ ಇನ್ನಷ್ಟು ಜೀವಕಳೆ ಬರಲಿದೆ. ಜಾಗತಿಕ ಮಟ್ಟದಲ್ಲೂ ಮೈಸೂರು ದಸರಾ ಮಿಂಚಲಿದೆ.
ಇ-ಟಿಕೆಟ್‌ಗೆ ಅವಕಾಶ ನೀಡಿ:
ಮೈಸೂರು ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯ ವೆಬ್‌ಸೈಟ್‌ಗಳು ಬಹಳ ಜನಪ್ರಿಯವಾಗಿವೆ. ಅದನ್ನು ಸಹಸ್ರಾರು ಜನರು ನಿತ್ಯ ವೀಕ್ಷಣೆ ಮಾಡುತ್ತಾರೆ. ಅಂತರ್ಜಾಲದ ಮೂಲಕ ಇ-ಟಿಕೆಟ್ ಖರೀದಿ ಮಾಡಿ ಪ್ರವೇಶಿಸುತ್ತಾರೆ. ಇದೇ ಮಾದರಿಯಲ್ಲಿ ದಸರಾ ವೆಬ್‌ಸೈಟ್ ರೂಪಿಸಬೇಕು. ಗೋಲ್ಡನ್ ಪಾಸ್, ಯುವ ದಸರಾ, ಜಂಬೂಸವಾರಿ ಮತ್ತು ಪಂಜಿನ ಕವಾಯತು, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ ಪ್ರವೇಶ ಟಿಕೆಟ್ ಸುಲಭವಾಗಿ ಜನಸಾಮಾನ್ಯರಿಗೆ ದೊರೆಯುವಂತೆ ಮಾಡಬೇಕು. ಇದರಿಂದ ಅನಗತ್ಯ ಕಿರಿಕಿರಿ, ಲಾಬಿ, ಒತ್ತಡವೂ ಕಡಿಮೆಯಾಗಲಿದೆ. ಜತೆಗೆ, ಜಿಲ್ಲಾಡಳಿತಕ್ಕೆ ಆದಾಯವೂ ಬರಲಿದೆ. ಇಂತಹವೊಂದು ಜನಸ್ನೇಹಿ ವೆಬ್‌ಸೈಟ್ ಅನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿರ್ವಹಣೆ ಮಾಡಬಹುದು.
ಖಾಸಗಿ ವೆಬ್‌ಸೈಟ್ ದರ್ಬಾರ್:
ದಸರಾ ಹೆಸರಿನಲ್ಲಿ ದುಡ್ಡು ಮಾಡುವವರು ಈಗಾಗಲೇ ಹುಟ್ಟಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಖಾಸಗಿ ವೆಬ್‌ಸೈಟ್‌ಗಳು ಸೃಷ್ಟಿಯಾಗಿವೆ. ಅವು ಜಿಲ್ಲಾಡಳಿತ ನಿರ್ವಹಣೆ ಮಾಡುವ ಅಧಿಕೃತ ವೆಬ್‌ಸೈಟ್‌ನಂತೆ ಭಾಸವಾಗುತ್ತಿವೆ. ಅದರಲ್ಲಿ ದಸರಾ ಮಾಹಿತಿಯೊಂದಿಗೆ ಪ್ರವಾಸದ ಪ್ಯಾಕೇಜ್, ಅವರ ವ್ಯವಹಾರಕ್ಕೆ ಅನುಕೂಲಕರ ಅಂಶಗಳು ಇವೆ. ಇದನ್ನು ನೆಚ್ಚಿಕೊಂಡು ಬರುವ ಪ್ರವಾಸಿಗರನ್ನು ಸುಲಿಗೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮೈಸೂರು ಪ್ರವಾಸೋದ್ಯಮ, ದಸರಾಕ್ಕೂ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ಕಡಿವಾಣ ಹಾಕಲು ಅಧಿಕೃತ ವೆಬ್‌ಸೈಟ್ ರಚಿಸಿ, ಅದರ ಸಂಪರ್ಕ ಕೊಂಡಿಯನ್ನು (ಲಿಂಕ್) ಮೈಸೂರು ಅರಮನೆ, ಮೃಗಾಲಯ, ಜಿಲ್ಲಾಡಳಿತ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇನ್ನಿತರ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ನೀಡುವ ಮೂಲಕ ಹೆಚ್ಚು ಜನರನ್ನು ತಲುಪಬೇಕಾಗಿದೆ. ಸ್ಪಷ್ಟ, ನಿಖರ ಮಾಹಿತಿ ನೀಡಿ ಪ್ರವಾಸಿಗರ ಸುಲಿಗೆ ತಪ್ಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತ್ವರಿತವಾಗಿ ಕ್ರಮ ವಹಿಸಬೇಕಿದೆ.
ಮಾಹಿತಿ ಕೊರತೆ:
ಮೈಸೂರು ಅರಮನೆ, ಮೃಗಾಲಯ ನಡೆದು ಬಂದ ಹಾದಿ ಸೇರಿದಂತೆ ಸಂಪೂರ್ಣ ವಿವರ, ದಸರಾ ಹಿನ್ನೆಲೆ, ಉಪಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಫೋಟೋ, ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಬೇಕು. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಆದರೆ, ಈ ರೀತಿಯ ಪ್ರಯತ್ನ ಇನ್ನೂ ನಡೆದಿಲ್ಲ ಎಂದು ಪ್ರವಾಸಿ ಡಿ.ಕೆ.ಆಶಾ ಬೇಸರ ವ್ಯಕ್ತಪಡಿಸಿದರು.
ಮೈಸೂರು ದಸರಾ ಮಹೋತ್ಸವದ ಕುರಿತು ಮಾಹಿತಿ ನೀಡುವ ದಸರಾ ವೆಬ್‌ಸೈಟ್ ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ಉದ್ಘಾಟಿಸಲಾಗುವುದು. ಸರ್ಕಾರದಿಂದ ಅನುಮೋದನೆ ಬರುವುದು ತಡವಾಗಿದೆ. ಹೀಗಾಗಿ, ವಿಳಂಬವಾಗಿದೆ.ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ