

ಸಾಗರ: ತಾಲೂಕಿನ ಕಣ್ಣೂರಿನಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಹೇಳಿದರು.
ಆನಂದಪುರಂ ಸಮೀಪದ ತಂಗಳವಾಡಿ ಅಂಗನವಾಡಿಯಲ್ಲಿ ಶನಿವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆ ಪತ್ರ ವಿತರಿಸಿ, ಜಮೀನು ವಿವಾದ ಇರುವ ಸ್ಥಳಕ್ಕೆ ಭೇಟಿ ಮಾತನಾಡಿದರು.
ಕಣ್ಣೂರು ಭಾಗದಲ್ಲಿ ಅಕ್ರಮ ಕಲ್ಲು ಕ್ವಾರಿ ನಡೆಸುತ್ತಿರುವ 17 ಜನರಿಗೆ ನೋಟಿಸ್ ನೀಡಲಾಗಿದೆ. 17 ಕಲ್ಲು ಕ್ವಾರಿ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಅಕ್ರಮ ಸಕ್ರಮಗೊಳಿಸಲು ತಿಳಿಸಲಾಗಿದೆ. ಕ್ವಾರಿ ಮಾಲೀಕರು ಅಧಿಕೃತಗೊಳಿಸಿಕೊಳ್ಳದಿದ್ದಲ್ಲಿ ಕ್ವಾರಿ ಪ್ರದೇಶವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ. ಅಲ್ಲದೇ ಅನಧಿಕೃತವಾಗಿ ಸರ್ಕಾರಿ ಜಾಗಗಳಿಗೆ ಬೇಲಿ ಹಾಕಿಕೊಳ್ಳುವ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಆ ಪ್ರದೇಶದ ಸಮಗ್ರ ಅಭಿವೃದ್ಧಿ, ಕಂದಾಯ ಇಲಾಖೆಯಿಂದ ಆಗಬೇಕಾಗಿರುವ ಕೆಲಸಗಳು, ಸರ್ಕಾರಿ ಕೆಲಸಗಳು ವಿಳಂಬವಾಗಿದ್ದರೆ ಸ್ಥಳದಲ್ಲಿಯೇ ಇದಕ್ಕೆ ಪರಿಹಾರ ನೀಡಲು ಕಾರ್ಯಕ್ರಮ ಆಯೋಜಿಸಿದೆ. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆ ಸಂಬಧಪಟ್ಟ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದರು.
ತಂಗಳವಾಡಿ ಮಹಿಳೆಯರು ಅಕ್ರಮ ಮದ್ಯ ಮಾರಾಟ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ಲಿಸದಿರುವುದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತಂಗಳವಾಡಿ, ಗಿಳಾಲಗುಂಡಿ, ಪತ್ರೆಹೊಂಡ, ಮುರುಘಾಮಠ ನಾಗರೀಕರು ಮನವಿ ನೀಡಿದರು. ಊರಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.