

ಹುಕ್ಕೇರಿ: ಜಗತ್ತನ್ನು ವೀಕ್ಷಿಸಲು ಸುಂದರ ಕಣ್ಣುಗಳಿರಬೇಕು. ಆ ಕಣ್ಣುಗಳ ಸುರಕ್ಷತೆ ನಮ್ಮ ಮುಖ್ಯ ಜವಾಬ್ದಾರಿಯಾಗಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪಥ್ವಿ ರಮೇಶ ಕತ್ತಿ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಸಚಿವ ದಿ. ಉಮೇಶ ಕತ್ತಿ ಅವರ 62ನೇ ಜನ್ಮದಿನಾಚರಣೆ ನಿಮಿತ್ತ ದಿ.ವಿಶ್ವನಾಥ ಕತ್ತಿ ಹಾಗೂ ದಿ.ರಾಜೇಶ್ವರಿ ಕತ್ತಿ ಸ್ಮಾರಕ ಧರ್ಮಾರ್ಥ ಟ್ರಸ್ಟ್ ಮತ್ತು ಜಿಲ್ಲಾ ಪಂಚಾಯಿತಿ, ತಾಲೂಕು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಣ್ಣಿನ (ನೇತ್ರ) ಉಚಿತ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ ಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಉಮೇಶ ಕತ್ತಿ ನಿಧನದಿಂದ ಕುಟುಂಬಕ್ಕೆ ತುಂಬಲಾಗದ ನಷ್ಟವುಂಟಾಗಿದೆ. ಅವರ ನಿಧನದ ಕಹಿ ನೆನಪು ಇನ್ನೂ ಕಾಡುತ್ತಿದೆ. ಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುವ ಸಲುವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಕಣ್ಣು ಉಚಿತ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮಾತನಾಡಿ, ಮುಂಬರುವ ವರ್ಷದಿಂದ ದೊಡ್ಡಪ್ಪನ ಜನ್ಮದಿನದ ನಿಮಿತ್ತ ಹೃದಯ ಚಿಕಿತ್ಸೆ ಶಿಬಿರ ಆಯೋಜಿಸಲು ನಮ್ಮ ಕುಟುಂಬ ನಿರ್ಧರಿಸಿದೆ ಎಂದರು.
ಟಿಎಚ್‌ಒ ಉದಯ ಕುಡಚಿ, ಮುಖ್ಯ ವೈದ್ಯಾಧಿಕಾರಿ ಎಂ.ಎಂ. ನರಸನ್ನವರ, ನೇತ್ರ ತಜ್ಞರಾದ ಡಾ. ಹಿತ್ತಲಮನಿ, ಡಾ. ಸಂದೀಪ ಕೋಲಕಾರ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲ್ಲಗೌಡ ಪಾಟೀಲ, ಹಿರಾ ಶುಗರ್ಸ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಅಜ್ಜಪ್ಪ ಕಲ್ಲಟ್ಟಿ, ರಾಜು ಮುನ್ನೋಳಿ, ಮಹಾವೀರ ನಿಲಜಗಿ, ರಾಯಪ್ಪ ಡೂಗ, ಸತ್ಯಪ್ಪ ನಾಯಿಕ, ಗುರು ಕುಲಕರ್ಣಿ, ಸುನೀಲ ನೇರಲಿ ಇತರರು ಇದ್ದರು.