

ಹಾಸನ: ಮನುಷ್ಯನ ಕಣ್ಣು ದೇವರು ನೀಡಿರುವ ವಿಸ್ಮಯವಾದ ಅಂಗವಾಗಿದ್ದು, ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಕಣ್ಣಿನ ನರ ರೋಗ ತಜ್ಞ ಡಾ.ಕೆ. ಸಂದೀಪ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ಕಣ್ಣಿನ ಸಂರಕ್ಷಣೆ ವಿಷಯದ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬರೂ ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳನ್ನು ಬಳಸುವುದು ಕಡಿಮೆ ಮಾಡಿದರೆ ಒಳ್ಳೆಯದು. ಚಿಕ್ಕ ಮಕ್ಕಳಲ್ಲಿ ಇಂದು ಕಣ್ಣಿನ ದೃಷ್ಟಿ ಸಮಸ್ಯೆ ಸಾಮಾನ್ಯವಾಗಿದೆ. ಈ ಹಿಂದೆ ಒಂದು ಶಾಲೆಯಲ್ಲಿ ಕನ್ನಡಕ ಧರಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇರುತಿತ್ತು, ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಶಾಲೆಯಲ್ಲಿ ಕನ್ನಡಕ ಧರಿಸದೆ ಇರುವವರಿಗಿಂತ ಕನ್ನಡಕ ಹಾಕಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
15 ವರ್ಷದವರೆಗೆ ಮಕ್ಕಳನ್ನು ಮಣ್ಣಿನೊಂದಿಗೆ ಬೆರೆತು ಆಟ ಆಡಲು ಬಿಡಬೇಕು. ಮಕ್ಕಳಿಗೆ ಇಂದು ನಾವು ಮೊಬೈಲ್ ಇಲ್ಲವೇ ಟಿವಿಗಳಿಗೆ ಹೆಚ್ಚು ಅಂಟಿಕೊಳ್ಳುವಂತೆ ಮಾಡಿದ್ದೇವೆ. ಮಕ್ಕಳನ್ನು ಕ್ರೀಡಾಂಗಣಗಳಿಗೆ ಕರೆ ತರುವ ಕೆಲಸವಾಗಬೇಕು. ಕಣ್ಣು ಬೆಳಕನ್ನು ಸೆರೆಹಿಡಿದು ಮೆದುಳಿಗೆ ರವಾನಿಸಿ ನಂತರ ಚಿತ್ರರೂಪದಲ್ಲಿ ನಮಗೆ ಕಾಣಿಸುವಂತೆ ಮಾಡುತ್ತದೆೆ. ಈ ಬೆಳಕು ಚಿತ್ರ ರೂಪದಲ್ಲಿ ಹೇಗೆ ಹೊರಬರುತ್ತದೆ ಎಂಬ ವಿಸ್ಮಯವನ್ನು ಕಂಡು ಹಿಡಿಯಲು ಇದುವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಹಾಗಾಗಿ ಮನುಷ್ಯನ ಅಂಗಾಂಗಗಳಲ್ಲಿ ಕಣ್ಣಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಮರಣಾನಂತರ ನೇತ್ರದಾನ ಮಾಡುವ ಮೂಲಕ ಇತರರಿಗೆ ಬೆಳಕಾಗುವ ಕೆಲಸ ಮಾಡಬೇಕು. ಯಾವುದೇ ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ತಮ್ಮ ಕಣ್ಣನ್ನು ದಾನ ಮಾಡಬಹುದು. ಕಣ್ಣು ದಾನ ಮಾಡಲು ರಕ್ತದ ಗುಂಪು ಹೊಂದಬೇಕೆಂಬುದಿಲ್ಲ. ಹಾಗಾಗಿ ಯಾರೇ ನೇತ್ರದಾನ ಮಾಡಿದರೂ ಅದನ್ನು ಇತರರಿಗೆ ಅಳವಡಿಕೆ ಮಾಡಬಹುದು. ಕಣ್ಣಿನ ಅಕ್ಷಿ ಪಟಲ ರೋಗಕ್ಕೆ ಮಧುಮೇಹ, ಬಿ.ಪಿ. ಕಾಯಿಲೆ ಕಾರಣವಾಗಿದ್ದು, ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಸಣ್ಣ ಕಾಯಿಲೆಯನ್ನು ಕೂಡಲೇ ವೈದ್ಯರಿಗೆ ತೋರಿಸಿ ಪರಿಹರಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಯಾವುದೇ ಕಾಯಿಲೆಯನ್ನು ಆರಂಭದ ಹಂತದಲ್ಲಿಯೇ ಗುಣಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ವರ್ಷಕ್ಕೆ ಒಮ್ಮೆ ಎಲ್ಲರೂ ತಮ್ಮ ಕಣ್ಣಿನ ಸ್ಥಿತಿಗತಿಯ ಬಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಇಲ್ಲವಾದರೆ 3 ವರ್ಷಕ್ಕೆ, ಕನಿಷ್ಠ ಪಕ್ಷ 5 ವರ್ಷಗಳಿಗೊಮ್ಮೆಯಾದರೂ ಕಣ್ಣನ್ನು ಪರೀಕ್ಷಿಸಿಕೊಳ್ಳಬೇಕು. ಕಣ್ಣಿನ ರೆಪ್ಪೆ ಕೂಡ ಹೃದಯದ ಬಡಿತವಿದ್ದಂತೆ ರೆಪ್ಪೆ ಕೂಡ ಒಂದು ನಿಮಿಷಕ್ಕೆ 22 ಸರಿ ಬಡಿಯುತ್ತಿರಬೇಕು. ಕಣ್ಣಿನ ಸಮಸ್ಯೆ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದ್ದು, ಆರಂಭಿಕ ಹಂತದಿಂದಲೇ ಇದನ್ನು ಸಂರಕ್ಷಣೆ ಮಾಡಿದರೆ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಪ್ರಸ್ತುತ ಮನುಷ್ಯನ ಆಹಾರ ಪದ್ಧತಿದಿಂದಾಗಿ 40 ವರ್ಷ ದಾಟಿದ ಬಹುತೇಕ ಮಂದಿ ಓದಲು ಕನ್ನಡಕ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರೋಟರಿ ಕ್ಲಬ್ ಹಾಸನ್ ರಾಯಲ್ ಸಂಸ್ಥೆಯ ಅಧಕ್ಷ ಯು.ವಿ. ಸಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ಪಿ.ರವಿ ಕುಮಾರ್, ವಲಯ ಸೇನಾನಿ ಡಾ. ವಿಕ್ರಂ, ಸದಸ್ಯರಾದ ಎಸ್. ಯೋಗೇಶ್, ಶ್ರೀಧರ್, ವೇಣುಗೋಪಾಲ್, ಕೆ.ಸಿ. ಹರ್ಷ, ನವೀನ್, ಡಾ.ಎಂ.ಡಿ. ನಿತ್ಯಾನಂದ, ಸತೀಶ್, ಎಸ್.ಕೆ. ಕುಮಾರ್, ವಿನಯ್, ಗಿರೀಶ್, ಎಚ್.ಕೆ. ದಿಲೀಪ್ ಕುಮಾರ್, ಮಹೇಶ್, ಕಿರಣ್, ಶ್ರೀನಂದ ಸೇರಿದಂತೆ ಇತರರು ಹಾಜರಿದ್ದರು.