

ಚಾಮರಾಜನಗರ : ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ವಿಚಿತ್ರ ಚರ್ಮರೋಗದಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಯನ್ನು ಸೋಮವಾರ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ ಹಾಗೂ ಶೆಟ್ಟಳ್ಳಿ ಗ್ರಾಮದಲ್ಲಿ ಕಳೆದ 15 ವರ್ಷದ ಹಿಂದೆ ಒಂದೇ ಸಮುದಾಯದ 8 ಮಕ್ಕಳು ಚರ್ಮರೋಗದಿಂದ ಮೃತಪಟ್ಟಿದ್ದರು.
ಕುರಟ್ಟಿ ಹೊಸೂರು ಹಾಗೂ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ನಾಲ್ವರು ಮಕ್ಕಳು ಈ ರೋಗದಿಂದ ಬಳಲುತ್ತಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ರೋಗಕ್ಕೆ ಒಳಗಾದ ಮಕ್ಕಳಿಗೆ ತಾತ್ಕಾಲಿಕ ಚಿಕಿತ್ಸೆಯನ್ನಷ್ಟೇ ನೀಡುತ್ತಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ.
ಈ ಬಗ್ಗೆ ವಿಜಯವಾಣಿ ಪತ್ರಿಕೆ ಜು.29ರ ಸಂಚಿಕೆಯಲ್ಲಿ ಮರುಕಳಿಸಿದ ವಿಚಿತ್ರ ಚರ್ಮರೋಗ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಅದೇ ದಿನ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ಗ್ರಾಮಗಳಿಗೆ ಭೇಟಿ ನೀಡಿ ಚರ್ಮರೋಗದಿಂದ ಬಳಲುತ್ತಿರುವ ಮಕ್ಕಳ ಮನೆಗಳಿಗೆ ತೆರಳಿ ಆರೋಗ್ಯದ ಬಗ್ಗೆ ಪಾಲಕರಿಂದ ವಿವರ ಪಡೆದಿದ್ದರು.
ಈ ವೇಳೆ ಸರ್ಕಾರದ ಗಮನಕ್ಕೆ ತಂದು ಚಿಕಿತ್ಸೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಡಿಸಿ ಭರವಸೆ ನೀಡಿದ್ದರು. ಜತೆಗೆ 13 ವರ್ಷದ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದ್ದರು. ಈ ದಿಸೆಯಲ್ಲಿ ಸೋಮವಾರ ಬಾಲಕಿಯನ್ನು ಪಾಲಕರ ಜತೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ವಿಜಯವಾಣಿಯೊಂದಿಗೆ ಮಾತನಾಡಿ, ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಇನ್ನೆರಡು ದಿನಗಳೊಳಗಾಗಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಬಳಿಕ ಚರ್ಮರೋಗಕ್ಕೆ ಸಂಬಂಧಿಸಿದಂತೆ ತಪಾಸಣೆಯ ಮೂಲಕ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.