

ಮದ್ದೂರು : ಕಣ್ಣು ದೇಹದ ಅವಿಭಾಜ್ಯ ಅಂಗವಾಗಿದ್ದು, ಅದರ ರಕ್ಷಣೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಉದ್ಯಮಿ ಕುಂದನಕುಪ್ಪೆ ಕುಮಾರ್ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಸುಮುಖ ಸೇವಾ ಟ್ರಸ್ಟ್, ಸುಮುಖ ನಿಧಿ ಲಿಮಿಟೆಡ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಣ್ಣು ಇಲ್ಲದಿದ್ದರೆ ಸುಂದರವಾಗಿರುವ ಪ್ರಪಂಚವನ್ನೇ ನೋಡಲಾಗದೇ ಬದುಕು ಕತ್ತಲಮಯವಾಗುತ್ತದೆ. ಪ್ರತಿಯೊಬ್ಬರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಅಗತ್ಯ. ಸಮಸ್ಯೆ ಚಿಕ್ಕದು ಇರುವಾಗಲೇ ಚಿಕಿತ್ಸೆ ಪಡೆದುಕೊಂಡು ನೇತ್ರಗಳ ಆರೈಕೆಗೆ ಮುಂದಾಗಬೇಕು. ಈ ಅಂಗಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದರು.
ದಾನ ಮಾಡಲು ಸಂಕಲ್ಪಿಸಿ: ಮರಣದ ನಂತರ ಕಣ್ಣುಗಳು ಮಣ್ಣಾಗುತ್ತದೆ. ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿದರೆ ಇನ್ನಿಬ್ಬರ ಬಾಳಿಗೆ ಬೆಳಕಾಗುತ್ತದೆ. ಪ್ರತಿಯೊಬ್ಬರೂ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ಅವರು ಮನವಿ ಮಾಡಿದರು. ಟ್ರಸ್ಟ್ ವತಿಯಿಂದ ತಾಲೂಕಿನಾದ್ಯಂತ ಹಲವು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಶಿಬಿರದಲ್ಲಿ ಕೆ.ಹೊನ್ನಲಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಕಣ್ಣಿನ ತಪಾಸಣೆಗೆ ಒಳಪಟ್ಟರು. 50 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಗಳನ್ನು ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಟ್ರಸ್ಟ್‌ನ ಕೆ.ಬೆಳ್ಳೂರು ಮಹೇಶ್, ತೈಲೂರು ಸಿದ್ದರಾಜು, ಕೇಬಲ್ ಸತೀಶ್, ನಗರಕೆರೆ ಅನಿಜಿತ್, ಡಾ. ಶ್ರೀಕಂಠಮೂರ್ತಿ ಇತರರು ಇದ್ದರು.