

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆಯ ಆವರಣದಲ್ಲಿ ಎಚ್. ಕೃಷ್ಣಸ್ವಾಮಿ ಟ್ರಸ್ಟ್, ರೋಟರಿ ಕ್ಲಬ್,ರೋಟರಿ ಮಿಡ್ ಟೌನ್ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ನೇತ್ರ ನಿರಂತರ ಕಾರ್ಯಕ್ರಮದಡಿ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿ ತಪಾಸಣೆಗೆ ಒಳಪಟ್ಟರು. 94 ಜನರನ್ನು ವೈದ್ಯರು ತಪಾಸಣೆ ನಡೆಸಿದರು. ಈ ಪೈಕಿ 63 ಜನರನ್ನು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಶಿಬಿರಕ್ಕೆ ಚಾಲನೆ ನೀಡಿದ ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ನೇತ್ರ ನಿರಂತರ ಕಾರ್ಯಕ್ರಮ ಯೋಜನೆಯಡಿ ತಿಂಗಳ ಎರಡನೇ ವಾರದ ಭಾನವಾರದಂದು ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜನೆ ಮಾಡುತ್ತಿದ್ದೇವೆ. ಕಳೆದ 7 ತಿಂಗಳಿನಿಂದಲೂ ನಿರಂತರವಾಗಿ ಶಿಬಿರ ನಡೆಯುತ್ತಿದೆ. ಬಡ ಜನರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿಕಿತ್ಸೆಯ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಎಚ್.ಕೆ ಮಹಾನಂದ್, ಅರವಿಂದ ಕಣ್ಣಿನ ಆಸ್ಪತ್ರೆಯ ವ್ಯೆದ್ಯ ವೃಂದ, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್, ವಿಶ್ವ ಚೇತನ ಕಾಲೇಜಿನ ಸಂಯೋಜಕ ರಾಜೇಶ್, ರವೀಂದ್ರ ಸೇರಿದಂತೆ ಮತ್ತಿತರಿದ್ದರು.