

ಬಸವರಾಜ ಇದ್ಲಿ ಹುಬ್ಬಳ್ಳಿ
ಇಲ್ಲಿಯ ಐತಿಹಾಸಿಕ ಉಣಕಲ್ಲ ಕೆರೆಗೆ ಪಿಶಾಚಿಯಂತೆ ಗಂಟು ಬಿದ್ದಿರುವ ಜಲಕಳೆಯ ಮಧ್ಯೆಯೂ ಅದರ ಸ್ವಚ್ಛತೆಗೆ ಸರ್ವ ಪ್ರಯತ್ನಗಳನ್ನು ಮುಂದುವರಿಸಲಾಗಿದೆ.
ಒಳಚರಂಡಿ ಕೊಳಚೆಯಿಂದ ಮಲಿನಗೊಂಡು ಪಿಶಾಚಿ ತಾವರೆ ಎಂಬ ಜಲಕಳೆಯಿಂದ ತುಂಬಿಕೊಂಡಿರುವ ಕೆರೆಯನ್ನು ಸ್ಮಾರ್ಟ್ಸಿಟಿ ಯೋಜನೆಯಡಿ ಸುಮಾರು 14.83 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛ ಮಾಡಲಾಗುತ್ತಿದೆ. ಕೆರೆಯನ್ನು ಮೊದಲಿನಂತೆ ಸ್ವಚ್ಛ ಹಾಗೂ ಇನ್ನಷ್ಟು ಸುಂದರಗೊಳಿಸಲು ರೂಪಿಸಲಾಗಿರುವ ಯೋಜನೆಯ ಕಾಮಗಾರಿ ಗುತ್ತಿಗೆಯನ್ನು ಬೆಂಗಳೂರಿನ ಜಿ. ನಾಗೇಂದ್ರ ಎಂಬುವವರು ಪಡೆದುಕೊಂಡು ವರ್ಷದ ಹಿಂದೆಯೇ ಕೆಲಸ ಆರಂಭಿಸಿದ್ದಾರೆ. ಈಗಾಗಲೇ ಜಲಕಳೆ ನಿಮೂಲನೆ ಕಾರ್ಯ ಭರದಿಂದ ಸಾಗಿದೆ. ಸ್ವಚ್ಛ ಮಾಡಿದಂತೆ ಆಗಾಗ ಬಂದು ಮತ್ತೆ ವಕ್ಕರಿಸಿದರೂ ಕೈಬಿಡದೇ ಜೆಸಿಬಿ ಯಂತ್ರಗಳ ಮೂಲಕ ಹೊರ ಹಾಕಲಾಗುತ್ತಿದೆ. ಅದರ ಜತೆಗೆ ಮಲೀನ ನೀರು ಸ್ವಚ್ಛ ಮಾಡಲು ಹಾಗೂ ಅದರಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜೈವಿಕ ತಂತ್ರಜ್ಞಾನ ಬಳಸಿ ಕೆರೆ ಸ್ವಚ್ಛತೆ ಮಾಡಲಾಗುತ್ತಿದ್ದು, ಆಮ್ಲಜನಕ ಪ್ರಮಾಣ ಹೆಚ್ಚಿಸಿ ಕಳೆ ನಿಯಂತ್ರಿಸಲಾಗುತ್ತಿದೆ. ಅದಕ್ಕಾಗಿ ಕೆರೆಯಲ್ಲಿ ಫ್ಲೋಟಿಂಗ್ ರಾಫ್ಟರ್ಸ್, ಏರೇಟರ್ಸ್ ಅಳವಡಿಸಲಾಗುತ್ತಿದೆ. ಈಗಾಗಲೇ ಉಣಕಲ್ಲ ಕೆರೆಯ ಉಳವಿ ಚನ್ನಬಸವೇಶ್ವರ ದೇವಸ್ಥಾನ ಪಕ್ಕದಲ್ಲಿ ನಾಲ್ಕು ಏರೇಟರ್ಸ್ (ಕಾರಂಜಿಯಂತೆ ಚಿಮ್ಮುವ ಯಂತ್ರ) ಅಳವಡಿಸಲಾಗಿದೆ. ಅವುಗಳಿಗೆ ಅಳವಡಿಸಿದ ಪಂಪ್ನಿಂದ ನೀರು ನಿರಂತರವಾಗಿ ಕಾರಂಜಿಯಂತೆ ಚಿಮ್ಮಲಿದೆ. ಈ ರೀತಿ ನಿರಂತರವಾಗಿ ಚಿಮ್ಮುವಾಗ ತನ್ನಿಂದತಾನೇ ವಾತಾವರಣದಲ್ಲಿನ ಆಮ್ಲಜನಕವು ನೀರಿಗೆ ಸೇರಿಕೊಳ್ಳುತ್ತದೆ. ನೀರಿನ ಗುಣಮಟ್ಟ ಹೆಚ್ಚಿಸುವುದು ಇದರ ಉದ್ದೇಶ.
ಜಲಕಳೆಯ ಹೂವಿನಿಂದ ಉದುರಿದ ಬೀಜಗಳು ಮತ್ತೆ ಮೊಳಕೆಯೊಡೆಯದಂತೆ ತಡೆಯಲು ಫ್ಲೋಟಿಂಗ್ ರಾಫ್ಟರ್ ಹಾಗೂ ಏರೇಟರ್ಸ್ ಸಹಾಯ ಮಾಡಲಿವೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು. ಈ ಹಿಂದೆ ಬೇರೆ ಬೇರೆ ವಿಧಾನದಲ್ಲಿ ಕಳೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರೂ ಅವು ಫಲ ನೀಡಿರಲಿಲ್ಲ. ಇದೀಗ ಜೈವಿಕ ತಂತ್ರಜ್ಞಾನ ಒಂದಿಷ್ಟು ಯಶಸ್ಸಿನ ಹಾದಿಯಲ್ಲಿ ಇರುವುದು ಅಧಿಕಾರಿಗಳ ಭರವಸೆ ಹೆಚ್ಚಿಸಿದೆ.
ಉಣಕಲ್ಲ ಕೆರೆಯಲ್ಲಿ ಏರೇಟರ್ಸ್ ಅಳವಡಿಸಲು ಅಗತ್ಯ ವಿದ್ಯುತ್ ಬಳಕೆಗೆ ಹೆಸ್ಕಾಂ ಅನುಮತಿ ಪಡೆಯಲಾಗಿದೆ. ಕೆರೆ ಸುತ್ತ ಸುಮಾರು 25 ಏರೇಟರ್ಸ್ ಹಾಕಲಾಗುತ್ತದೆ. ಇದರಿಂದ ನೀರಿನ ಗುಣಮಟ್ಟ ಹೆಚ್ಚಲಿದೆ, ವಾಸನೆಯೂ ಕಡಿಮೆಯಾಗಲಿದೆ. ಕೆಲ ತಿಂಗಳಲ್ಲಿ ಕೆರೆ ಸ್ವಚ್ಛವಾಗಿ ಒಂದು ಹಂತಕ್ಕೆ ಬರಲಿದೆ.| ಎಸ್.ಎಚ್. ನರೇಗಲ್ಲ ವಿಶೇಷಾಧಿಕಾರಿ, ಸ್ಮಾರ್ಟ್ ಸಿಟಿ ಲಿಮಿಟೆಡ್
ಕೊಳಚೆ ನೀರಿಗೆ ತಡೆಯೊಡ್ಡುವುದೇ ಸವಾಲು
ಗಾಮನಗಟ್ಟಿ, ಸುತಗಟ್ಟಿ ಭಾಗದಿಂದ ಉಣಕಲ್ಲ ಕೆರೆಗೆ ಮಲಿನ ನೀರು ಸೇರುತ್ತಿದೆ. ಅಲ್ಲದೆ, ಭೈರಿದೇವರಕೊಪ್ಪ ಬಳಿ ಐದು ವರ್ಷದ ಹಿಂದೆ ಸ್ಥಾಪಿಸಲಾದ ಚಿಕ್ಕ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ಕೆಲ ದಿನಗಳಿಂದ ಬಂದ್ ಆಗಿದೆ. ಅಲ್ಲಿಂದಲೂ ಮಲೀನ ನೀರು ನೇರವಾಗಿ ಕೆರೆಗೆ ಬರುತ್ತಿದೆ. ಇದರಿಂದಾಗಿ ಜಲಕಳೆ ಶರವೇಗದಲ್ಲಿ ಬೆಳೆಯುತ್ತಿದೆ. ಅಲ್ಲದೆ, ಕೆರೆ ಹಿಂಭಾಗದಿಂದ ಗಾಳಿಯೊಂದಿಗೆ ಹುಬ್ಬಳ್ಳಿ- ಧಾರವಾಡ ರಸ್ತೆ ಕಡೆಗೆ ಕಳೆ ಹರಿದು ಬರುತ್ತಿದೆ. ಉಣಕಲ್ಲ ಕೆರೆ ಸೇರುತ್ತಿರುವ ಕೊಳಚೆಗೆ ತಡೆಯೊಡ್ಡುವುದು ಹಾಗೂ ಜಲಕಳೆ ನಿಮೂಲನೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೊಳಚೆ ತಡೆಯಲು ಇನ್ನೂ ಆರು ತಿಂಗಳಾದರೂ ಬೇಕಾಗಬಹುದು. ಈಗಾಗಲೇ ಪೈಪ್ಲೈನ್ ಮೂಲಕ ಪರ್ಯಾಯ ಮಾರ್ಗದಲ್ಲಿ ಗಬ್ಬೂರ ಎಸ್ಟಿಪಿಗೆ ಕಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.