

ಬಸವಕಲ್ಯಾಣ: ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಗುರು. ಅವರು ಸಚ್ಚಿದಾನಂದ ಶಿವಸ್ವರೂಪರು ಎಂದು ಪ್ರಥಮ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಮನುಕುಲಕ್ಕೆ ಬೋಧಿಸಿದ್ದಾರೆ ಎಂದು ಕಿಟ್ಟಾ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ನುಡಿದರು.
ಶ್ರಾವಣ ಮಾಸ ನಿಮಿತ್ತ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಸಹಯೋಗದಡಿ ಗವಿಮಠದಲ್ಲಿ ಗುರುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ವಿಶೇಷ' ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗವಿಮಠವು ಅಪಾರ ಶಕ್ತಿ ಹೊಂದಿದ ಪವಿತ್ರ ಸ್ಥಳ, ಶ್ರದ್ಧಾ- ಭಕ್ತಿಯ ಕೇಂದ್ರ. ಅಭಿನವ ಶ್ರೀಗಳ ಸತ್‌ಸಂಕಲ್ಪ ಹಾಗೂ ಭಕ್ತರ ಭಕ್ತಿಯಿಂದ ಸಂಸ್ಥಾನ ಅಭಿವೃದ್ಧಿಯಾಗಿದೆ ಎಂದರು.
ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಬಸವಣ್ಣನವರುಲಿಂಗ ಮಧ್ಯೆ ಜಗತ್ ಸರ್ವಂ' ಎಂಬ ವಚನದ ಮೂಲಕ ಜಗತ್ತೇ ಶಿವಮಯವಾಗಿದೆ ಎಂದು ಸಾರಿದ್ದಾರೆ. ಭಕ್ತರೇ ನಮ್ಮ ಮಠದ ನಿಜವಾದ ಆಸ್ತಿ. ಅವರ ತನು ಮನ ಧನ ಸೇವೆಯೇ ಸಂಸ್ಥಾನ ಗವಿಮಠದ ಅಭಿವೃದ್ಧಿಗೆ ಕಾರಣ. ಧರ್ಮ ಕಾರ್ಯ ಮತ್ತು ಸಮಾಜ ಸೇವೆಯೇ ನಮ್ಮ ಧ್ಯೆಯ ಎಂದು ಹೇಳಿದರು.
ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸವಿತಾ ರಮೇಶ ಸ್ವಾಮಿ, ಶ್ರೀ ಮದ್ವೀರಶೈವ ಸದ್ಭೋದನ ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ, ಬಸವರಾಜ ಸೊನ್ನಗಿ, ಮಲ್ಲಿಕಾರ್ಜುನ ನಂದಿ, ಎ.ಜಿ.ಪಾಟೀಲ್, ರಾಮಚಂದ್ರ ಹುಡಗೆ, ಸುಭದ್ರಾ ಸ್ವಾಮಿ, ಮಲ್ಲಿಕಾರ್ಜುನ ಅಲಶೆಟ್ಟಿ, ಸುಭಾಷ ರಗಟೆ, ಪ್ರೊ.ರಾಜೋಳೆ, ರಮೇಶ ರಾಜೋಳೆ, ವೀರಶೆಟ್ಟಿ ಎಂ.ಪಾಟೀಲ್ ಇತರರಿದ್ದರು.
ಸಂಜುಕುಮಾರ ಜಾಧವ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗುಡೆ ನಿರೂಪಣೆ ಮಾಡಿದರು. ಶರಣಬಸಪ್ಪ ಅಲಗುಡೆ ಪ್ರಾರ್ಥನಾಗೀತೆ ಹಾಡಿದರು.