ಕಣಿವೆಮಾರಮ್ಮ, ಮಾತಂಗೆಮ್ಮ ದೇಗುಲ ನವೀಕರಣ

Mathangemma Devi Degula
Published on

ಚಿತ್ರದುರ್ಗ: ಹಳೆ ಬೆಂಗಳೂರು ರಸ್ತೆಯ ಕುಂಚಿಗನಾಳು ಗ್ರಾಮದಲ್ಲಿ ನೆಲೆ ನಿಂತಿರುವ ಕಣಿವೆಮಾರಮ್ಮ ದೇವಿ, ಮಾತಂಗೆಮ್ಮ ದೇವಿ ದೇಗುಲಗಳ ನವೀಕರಣ, ನೂತನ ಗೋಪುರ ನಿರ್ಮಾಣ ಹಾಗೂ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮ ಸೋಮವಾರ ಆರಂಭವಾಗಿದ್ದು, ಮೇ 14ರಂದು ಕೂಡ ಜರುಗಲಿದೆ.

ಸೋಮವಾರ ಸಂಜೆ 6ಕ್ಕೆ ಗಣ, ವಾಸ್ತು, ರಕ್ಷಜ್ಞ ಹೋಮ ಸೇರಿ ಇನ್ನಿತರೆ ಪೂಜಾ ಕೈಂಕರ್ಯಗಳು ದೊಡ್ಡಸಿದ್ಧವ್ವನಹಳ್ಳಿಯ ಪುರೋಹಿತ ತಿಪ್ಪೇಸ್ವಾಮಿ ನೇತೃತ್ವದಲ್ಲಿ ನೆರವೇರಿದವು.

14ರ ಮುಂಜಾನೆ 4ರ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಪೂಜೆ ಜರುಗಲಿದ್ದು, ಶ್ರೀಕ್ಷೇತ್ರ ಕೊಟ್ಟೂರಿನ ಭೂತ ಬುಜಂಗಮಠದ ಶ್ರೀ ರಾಜ ಯೋಗೇಂದ್ರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸುವರು. ಅಲ್ಲದೆ, ಇದೇ ವೇಳೆ ಶ್ರೀ ಕಣಿವೆಮಾರಮ್ಮ ದೇವಿ ದೇಗುಲದ ನೂತನ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ.

ಅಂದು ಶ್ರೀ ಮಾತಂಗೆಮ್ಮ ದೇವಿ ದೇಗುಲದ ನೂತನ ಗೋಪುರಕ್ಕೆ ಕಳಸಾರೋಹಣ ಜರುಗಲಿದ್ದು, ಬೆಳಗ್ಗೆ 6ರಿಂದ 7.30ರವರೆಗೆ ಚಂಡಿಕಾ ಹೋಮ, 8.30ಕ್ಕೆ ಮಹಾಮಂಗಳಾರತಿ ನೆರವೇರಲಿದ್ದು, 10.30ರಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಅತಿಥಿಗಳಾಗಿ ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಈ ಧಾರ್ಮಿಕ ಕಾರ್ಯಕ್ರಮಕ್ಕೆ ದೇವಿಯ ಸದ್ಭಕ್ತರು, ಕುಂಚಿಗನಾಳ್ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ದೇಗುಲ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net