ಕಣಿಯರ್ ಸಮಾಜದಿಂದ ಜ್ಯೋತಿಷ ಶಾಸ್ತ್ರ ರಕ್ಷಣೆ

23tnpnewsfile01 (3)
Published on

ತಿ.ನರಸೀಪುರ: ರಾಜ್ಯದಲ್ಲಿ ಸಾವಿರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಕಣಿಯರ್ ಸಮಾಜ ಜ್ಯೋತಿಷ ಶಾಸ್ತ್ರ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಮೇಲುಕೋಟೆ ಜ್ಯೋತಿಷ ವಿದ್ವಾಂಸ ಡಾ.ಶೆಲ್ವಪಿಳ್ಳೈ ಐಯ್ಯಂಗಾರ್ ಅಭಿಪ್ರಾಯಪಟ್ಟರು.


ಬೆಂಗಳೂರಿನ ರಾಜಾಜಿನಗರದ ಶ್ರೀ ಬಿ.ಸಿ.ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ತಿರುಮಕೂಡಲಿನ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಣಿಯರ್/ಕಣಿಯನ್ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಣಿಯರ್ ಜನಾಂಗ ಅತ್ಯಂತ ಹಿಂದುಳಿದ, ರಾಜಕೀಯವಾಗಿಯೂ ಬೆಂಬಲವಿಲ್ಲದ ಸಮಾಜ. ಆರ್ಥಿಕ ಮತ್ತು ಶೈಕ್ಷಣಿಕ ವಾಗಿಯೂ ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯವಾಗಿದೆ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಸಮಾಜವಾಗಿದ್ದು, ಜ್ಯೋತಿಷ ಶಾಸ್ತ್ರ ರಕ್ಷಿಸುವ ಕೆಲಸ ಮಾಡುತ್ತಿದೆ ಎಂದರು.


ಕಣಿಯರ್ ಜನಾಂಗಕ್ಕೆ ಜ್ಯೋತಿಷ ಮತ್ತು ಭವಿಷ್ಯ ಎರಡೂ ಮೂಲಪರಂಪರೆಯ ವಿದ್ಯೆಗಳಾಗಿದ್ದು, ಯಾವುದೇ ಕಾರಣಕ್ಕೂ ಸಮುದಾಯದವರು ಪಾರಂಪರಿಕ ವಿದ್ಯೆ ಬಿಡಬಾರದು. ಸಂವಿಧಾನದ ಪ್ರಕಾರ ನಮ್ಮ ಪರಂಪರೆ ಹಾಗೂ ಇತಿಹಾಸ ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೆಯೇ ಕಣಿಯರ್ ಸಮಾಜ ತಮ್ಮ ಮೂಲ ವಿದ್ಯೆಗಳಾದ ಜ್ಯೋತಿಷ ಮತ್ತು ಭವಿಷ್ಯಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.


ಪರಂಪರೆಯನ್ನು ರಕ್ಷಣೆ ಮಾಡುವ ಮೂಲಕ ಪಾರಂಪರಿಕ ಔಷಧಗಳನ್ನು ರಕ್ಷಣೆ ಮಾಡಬೇಕು. ಆ ಮೂಲಕ ನಾಟಿ ಔಷಧಗಳ ಬಳಕೆಗೆ ಮತ್ತೆ ಒತ್ತು ನೀಡಿದರೆ ಹಣಕ್ಕಾಗಿ ಹಪಹಪಿಸುತ್ತಿರುವ ಫಾರ್ಮಾ ಕಂಪನಿಗಳ ಲಾಬಿಗೆ ನಿಯಂತ್ರಣ ಹೇರಬಹುದು ಎಂದರು.
ವಕೀಲ ಎಲ್.ಮಹೇಶ್ ಮಾತನಾಡಿದರು. ಕಣಿಯರ್ ಸಮಾಜದ ಮಾಜಿ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ನಿಮ್ಹಾನ್ಸ್ ಆಸ್ಪತ್ರೆ ಸಂಪಾದಕ ಡಾ.ಎನ್.ಗೋಪಾಲ ಕೃಷ್ಣ, ಬೆಂಗಳೂರು ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ನಿಮಾ ಜ್ಞಾನದೇವ್, ಮೈಸೂರು ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಪುಷ್ಪ ಎಸ್.ಮೂರ್ತಿ, ಮೌಂಟ್ ಕಾರ್ಮೆಲ್ ಪಿಯು ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ.ಶ್ವೇತಾ, ಪ್ರಾಧ್ಯಾಪಕ ಡಾ.ಗೌತಮ್, ಜ್ಯೋತಿಷಿ ರತ್ನಾಕರ ಮೂರ್ತಿ, ನಾಟಕ ನಿರ್ದೇಶಕ ಕಿರಗಸೂರು ರಾಜಪ್ಪ, ರಂಗಭೂಮಿ ಕಲಾವಿದ ಡಾ.ಎಚ್.ವಿ.ರಾಜಶೇಖರ್, ಖ್ಯಾತ ತಬಲಾ ವಾದಕ ಎಂ.ಕೃಷ್ಣಮೂರ್ತಿ, ಟ್ಯಾಕ್ಸಿಡರ್ಮಿ ಕಲಾವಿದೆ ಕೆ.ಮಂಜುಳಾ, ನಿವೃತ್ತ ಸೈನಿಕ ಕೆ.ಪಿ.ವಿಜಯ್ ಅರವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪೋಲೀಸ್ ಅಧಿಕಾರಿ ಟಿ.ಸಿ.ನಾಗರಾಜ್, ಕರ್ನಾಟಕ ರಾಜ್ಯ ಕಣಿಯರ ಮಹಾಸಭಾದ ಅಧ್ಯಕ್ಷ ಡಿ.ಪಾಂಡುರಂಗ, ಹುಲ್ಲಹಳ್ಳಿ ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಬಿ.ಮರಿಯಪ್ಪ, ನಿವೃತ್ತ ಬ್ಯಾಂಕ್ ನೌಕರ ರಂಗಸ್ವಾಮಿ, ಕು.ಸುಪ್ರಿಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net