

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಜಿಲ್ಲೆಯಲ್ಲೂ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಇದ್ದಾರೆ. ಆದರೆ, ಈ ವಿಷಯ ಎಲೆಕ್ಷನ್‌ನಲ್ಲಿ ನಗಣ್ಯವಾಗಿದೆ.
ಜಿಲ್ಲೆಯ ಅಭ್ಯರ್ಥಿಗಳ ಪೈಕಿ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ವಿರುದ್ಧವೇ ಅಧಿಕ ಪ್ರಕರಣಗಳಿವೆ. ಇಬ್ಬರು ಹಾಲಿ, ಇಬ್ಬರು ಮಾಜಿ ಶಾಸಕರ ವಿರುದ್ಧ ತಲಾ ಎರಡು ಕೇಸ್‌ಗಳಿವೆ. ಒಂದು ತಿಂಗಳಿಂದೀಚೆಗೆ ರಾಜಕೀಯಕ್ಕೆ ಬಂದಿರುವ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕೆಲ ಅಭ್ಯರ್ಥಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಕೆಲವು ತನಿಖಾ ಹಂತದಲ್ಲಿದ್ದರೆ, ಇನ್ನೂ ಕೆಲವು ಕೇಸ್‌ಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಕೆಲ ಪ್ರಕರಣಗಳ ಆರೋಪಪಟ್ಟಿ ಇನ್ನೂ ಸಲ್ಲಿಕೆಯಾಗಿಲ್ಲ. ಆದರೆ, ಇದು ಚುನಾವಣಾ ಚರ್ಚಾ ವಿಷಯವೇ ಆಗಿಲ್ಲ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅಭ್ಯರ್ಥಿಗಳು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯ ಬಹಳಷ್ಟು ಅಭ್ಯರ್ಥಿಗಳಿಗೆ ಅಪರಾಧ ಹಿನ್ನೆಲೆ ಇಲ್ಲ. ಇದ್ದರೂ ಕೊಲೆ, ಅತ್ಯಾಚಾರದಂಥ ಗಂಭೀರ ಸ್ವರೂಪದ ಕ್ರಿಮಿನಲ್ ಕೇಸ್‌ಗಳಿಲ್ಲ.
ಮುಖ್ಯಮಂತ್ರಿ ಆಗಿಯೂ ಕಾರ್ಯನಿರ್ವಹಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ 13 ಎಫ್‌ಐಆರ್ ದಾಖಲಾಗಿವೆ. 2007ರಲ್ಲಿ ಮೈಸೂರು ದಕ್ಷಿಣ ಠಾಣೆಯೊಂದರಲ್ಲೇ 5 ಪ್ರಕರಣಗಳಿವೆ. ಈ ಪ್ರಕರಣಗಳ ಕುರಿತು ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಮಂಡ್ಯದಲ್ಲಿ 1, ಬೆಂಗಳೂರು ನಗರದಲ್ಲಿ 2, ರಾಮನಗರ ಜಿಲ್ಲೆಯಲ್ಲಿ 4 ಕೇಸ್‌ಗಳಿವೆ. ಬೆಂಗಳೂರಿನಲ್ಲಿರುವ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಲಯದಲ್ಲಿ ಎರಡು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ.
ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿ ಆಗಿರುವ ಬಿಜೆಪಿ ಅಭ್ಯರ್ಥಿ ಸಚಿವ ವಿ.ಸೋಮಣ್ಣ ವಿರುದ್ಧವೂ ಭ್ರಷ್ಟಾಚಾರದ ಕುರಿತು ಕ್ರಿಮಿನಲ್ ಪ್ರಕರಣವಿದೆ. ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಈ ಕೇಸ್ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.
ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ ವಿರುದ್ಧವೂ ಪ್ರಕರಣ ಇದೆ. ಕರ್ನಾಟಕ ಗೃಹಮಂಡಳಿ ಮೈಸೂರು ವಿಭಾಗದ ಭೂ ಖರೀದಿ ವಿವಾದ ಇವರ ಕೊರಳಿಗೆ ಸುತ್ತುಕೊಂಡಿದೆ. ಭ್ರಷ್ಟಾಚಾರ ನಿಗ್ರಹ ದಳದ ಮೈಸೂರಿನ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇವರ ವಿರುದ್ಧ 2017ರಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ.
ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಚ್.ಪಿ.ಮಂಜುನಾಥ್ ವಿರುದ್ಧವೂ 2 ಪ್ರಕರಣಗಳಿವೆ. ಅತಿಕ್ರಮ ಪ್ರವೇಶ, ನಿಂದನೆ, ಕೊಲೆ ಬೆದರಿಕೆ ಆರೋಪದಡಿ 2019ರಲ್ಲಿ ಮೈಸೂರು ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 4 ವರ್ಷವಾಗಿದ್ದರೂ ನ್ಯಾಯಾಲಯಕ್ಕೆ ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಕೆ.ಮಹದೇವ ವಿರುದ್ಧ ಜೀವನಾಂಶದ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ.
ಎಚ್.ಡಿ.ಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅನಿಲ್ ಚಿಕ್ಕಮಾದು ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿ, ಕಾನೂನುಬಾಹಿರ ಸಭೆ, ಗಲಭೆ ಮಾಡಿರುವ ಕುರಿತು ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿದ್ದು, 2021ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ವಿರುದ್ಧ 2 ಎಫ್‌ಐಆರ್ ದಾಖಲಾಗಿವೆ. ದೇವರಾಜ ಠಾಣೆಯಲ್ಲಿ 2020ರಲ್ಲಿ, ಸರಸ್ವತಿಪುರಂ ಠಾಣೆಯಲ್ಲಿ 2019ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಇವರ ವಿರುದ್ಧ ದಾಖಲಾಗಿರುವ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ.
ಕೃಷ್ಣರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಟಿ.ವೆಂಕಟೇಶ್ ವಿರುದ್ಧ ಚೆಕ್‌ಬೌನ್ಸ್ ಪ್ರಕರಣ, ಮಾನಹಾನಿ ಪ್ರಕರಣ ಇವೆ. ವಿಚಾರಣಾ ಹಂತದಲ್ಲಿರುವ ಈ ಪ್ರಕರಣದ ಕುರಿತು ನ್ಯಾಯಾಲಯದಿಂದ ಇನ್ನೂ ತೀರ್ಪು ಹೊರಬಿದ್ದಿಲ್ಲ. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ವಿರುದ್ಧವೂ ಆರೋಪ ಇದೆ. ಮುಂಜನಹಳ್ಳಿ ಗ್ರಾಮದಲ್ಲಿ ಭೂಮಿಪೂಜೆ ಸಂದರ್ಭ ನಡೆದ ಗಲಭೆ ಸಂಬಂಧ ಸಾಲಿಗ್ರಾಮ ಠಾಣೆಯಲ್ಲಿ 2022ರಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ತಂದೆ ಆರ್.ಧ್ರುವನಾರಾಯಣ ಅವರ ನಿಧನದ ಬಳಿಕ ಅನಿರೀಕ್ಷಿತವಾಗಿ ಚುನಾವಣಾ ರಾಜಕೀಯ ಪ್ರವೇಶ ಮಾಡಿರುವ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ದರ್ಶನ್ ವಿರುದ್ಧವೂ ಕೇಸ್ ಇದೆ. ಹಣ ಹೊಂದಿರುವ ಕವರ್ ಅನ್ನು ಸಾರ್ವಜನಿಕರಿಂದ ಪಡೆದ ಆರೋಪದಡಿ ನಂಜನಗೂಡು ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
4 ಕೈ ಶಾಸಕರ ವಿರುದ್ಧ ಕರೊನಾ ಕೇಸ್
ಮೇಕೆದಾಟು ಕುಡಿಯುವ ನೀರು ಯೋಜನೆಗೆ ಆಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರಾದ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ತನ್ವೀರ್‌ಸೇಠ್ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ರಾಮನಗರ ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸೋಂಕಿಲ್ಲ
ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಸಾ.ರಾ.ಮಹೇಶ್, ಬಿ.ಹರ್ಷವರ್ಧನ್, ಎಂ.ಅಶ್ವಿನ್‌ಕುಮಾರ್, ಮಾಜಿ ಶಾಸಕರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಸಿ.ಎಚ್.ವಿಜಯಶಂಕರ್ ಅವರಿಗೆ ಅಪರಾಧ ಪ್ರಕರಣದ ಸೋಂಕು ಅಂಟಿಕೊಂಡಿಲ್ಲ.
ಕ್ಷೇತ್ರ ಅಭ್ಯರ್ಥಿ ಪಕ್ಷ ಪ್ರಕರಣ ಸಂಖ್ಯೆ
ಹುಣಸೂರು ಜಿ.ಡಿ.ಹರೀಶ್‌ಗೌಡ ಜೆಡಿಎಸ್ 1
ಹುಣಸೂರು ಎಚ್.ಬಿ.ಮಂಜುನಾಥ್ ಕಾಂಗ್ರೆಸ್ 2
ಎಚ್.ಡಿ.ಕೋಟೆ ಅನಿಲ್‌ಕುಮಾರ್ ಚಿಕ್ಕಮಾದು ಕಾಂಗ್ರೆಸ್ 2
ಕೃಷ್ಣರಾಜ ಎಂ.ಕೆ.ಸೋಮಶೇಖರ್ ಕಾಂಗ್ರೆಸ್ 2
ಕೃಷ್ಣರಾಜನಗರ ಎಚ್.ಟಿ.ವೆಂಕಟೇಶ್ ಬಿಜೆಪಿ 2
ಕೆ.ಆರ್.ನಗರ ಡಿ.ರವಿಶಂಕರ್ ಕಾಂಗ್ರೆಸ್ 1
ನಂಜನಗೂಡು ಡಿ.ದರ್ಶನ್ ಕಾಂಗ್ರೆಸ್ 1
ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್ 1
ಪಿರಿಯಾಪಟ್ಟಣ ಕೆ.ಮಹದೇವ ಜೆಡಿಎಸ್ 1
ವರುಣ ಸಿದ್ದರಾಮಯ್ಯ ಕಾಂಗ್ರೆಸ್ 13
ವರುಣ ವಿ.ಸೋಮಣ್ಣ ಬಿಜೆಪಿ 1