ಕಣಗಾಲ್ ಆರೋಗ್ಯ ಕೇಂದ್ರಕ್ಕೆ ಟಿಎಚ್‌ಒ ಭೇಟಿ

04BTP01
ಕಣಗಾಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶೇಷ ತುರ್ತುಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಬಾಬು ದಾಖಲಾತಿಗಳನ್ನು ಪರಿಶೀಲಿಸಿದರು.
Published on

ಬೆಟ್ಟದಪುರ: ಸಮೀಪದ ಕಣಗಾಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಬಾಬು ಭೇಟಿ ನೀಡಿ ವಿಶೇಷ ತುರ್ತು ಸಭೆ ನಡೆಸಿದರು.

ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯಾಧಿಕಾರಿ ಇಲ್ಲದಿರುವುದರ ಜತೆಗೆ ಪ್ರಭಾರವಾಗಿ ನೇಮಕವಾಗಿರುವ ವೈದ್ಯಾಧಿಕಾರಿ ರೋಗಿಗಳ ಸೇವೆಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಜನರು ಚಿಕಿತ್ಸೆಗಾಗಿ ಪರದಾಡುತ್ತಿರುವ ಬಗ್ಗೆ ವಿಜಯವಾಣಿಯಲ್ಲಿ ಏ.1ರ ಸಂಚಿಕೆಯಲ್ಲಿ ಕಣಗಾಲಿನಲ್ಲಿ ವೈದ್ಯರ ಕೊರತೆ ಎಂಬ ಶೀರ್ಷಿಕೆಯಡಿವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ವಿಶೇಷ ಸಭೆ ನಡೆಸಿದೆ.

ಆಸ್ಪತ್ರೆಯ ಹೊರರೋಗಿಗಳ ದಾಖಲಾತಿ ಸೇರಿದಂತೆ ಇತರ ದಾಖಲಾತಿ ಪುಸ್ತಕಗಳನ್ನು ಪರಿಶೀಲಿಸಿ ಬಳಿಕ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಬಾಬು, ಆಸ್ಪತ್ರೆಯಲ್ಲಿ ಕಾಯಂ ವೈದ್ಯಾಧಿಕಾರಿಗಳ ಸಮಸ್ಯೆ ಇರುವ ಬಗ್ಗೆ ಇಲಾಖೆ ಗಮನಕ್ಕೆ ತರಲಾಗಿದೆ. ವೈದ್ಯರು ಇಲ್ಲವೆಂದು ಯಾವುದೇ ಕಾರಣಕ್ಕೂ ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ವಾಪಸ್ ಕಳುಹಿಸಬಾರದು. ಅವರಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಬೇಕು ಎಂದು ಸ್ಟಾಫ್‌ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.

ಕೇಂದ್ರದ ಪ್ರಭಾರ ವೈದ್ಯಾಧಿಕಾರಿಯಾಗಿರುವ ಹಲಗನಹಳ್ಳಿ ಆರೋಗ್ಯ ಕೇಂದ್ರದ ಡಾ.ಡಿ.ಎನ್ ಮಧುರಾ ಅವರು ಇಲ್ಲಿಯೂ ಬಂದು ರೋಗಿಗಳನ್ನು ತಪಾಸಣೆ ಮಾಡಬೇಕು. ಮುಂದಿನ ದಿನಗಳಲ್ಲಿ ರೋಗಿಗಳಿಗೆ ಸಮಸ್ಯೆಯಾಗುತ್ತಿರುವುದು ಕಂಡು ಬಂದರೆ ಇಲಾಖೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ವೈದ್ಯಾಧಿಕಾರಿ ಡಾ.ಡಿ.ಎನ್ ಮಧುರ, ಸಿಬ್ಬಂದಿ ವಿಶ್ವನಾಥ್, ರಾಜೇಶ್ವರಿ, ಸವಿತಾ, ದಿವ್ಯರಾಣಿ, ಸಹನಾ, ರುದ್ರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net