

ಸವದತ್ತಿ: ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಸಂಭವನೀಯ ರೋಗಗಳಿಂದ ಮುಕ್ತಿಗೊಳಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಹನುಮಗೇರಿ ಓಣಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂ.2ರಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಬುಧವಾರ ಆಯೋಜಿಸಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಲಸಿಕೆಗಳಿಂದ ಯಾರೂ ವಂಚಿತರಾಗದೆ ಸರ್ಕಾರಿ ಮಾರ್ಗಸೂಚಿ ಅನುಸಾರ ಲಸಿಕೆ ಪಡೆದು ಆರೋಗ್ಯಯುತ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಮಾತನಾಡಿ, ಮಕ್ಕಳಿಗೆ ಬಾಧಿಸುವ 12 ರೋಗಗಳ ನಿಯಂತ್ರಣಕ್ಕೆ ಪೂರಕವಾಗಿ ಲಸಿಕೆ ನೀಡಲಾಗುತ್ತಿದ್ದು, ಮಿಷನ್ ಇಂದ್ರಧನುಷ್ ದೇಶಾದ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿದೆ. ಲಸಿಕಾ ಅಭಿಯಾನದ ಪ್ರಯೋಜನದಿಂದ ಆರೋಗ್ಯಯುತ ಸಮಾಜ ನಿರ್ಮಿಸಲು ಸಹಕಾರಿಯಾಗಲಿದೆ. ಮೊದಲ ಹಂತದಲ್ಲಿ ಆ.7ರಿಂದ 12, 2ನೇ ಹಂತ ಸೆ. 11ರಿಂದ 16 ಮತ್ತು 3ನೇ ಹಂತವಾಗಿ ಅಕ್ಟೋಬರ್ 9ರಿಂದ 14 ಲಸಿಕಾ ಅಭಿಯಾನ ನಡೆಯಲಿದೆ.
2ರಿಂದ 5 ವರ್ಷದ ಮಕ್ಕಳು, ಗರ್ಭಿಣಿಯರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರತಿ ಅಂಗನವಾಡಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, ಗ್ರಾಮೀಣ ಮಟ್ಟದಲ್ಲಿ ಅಭಿಯಾನ ಯಶಸ್ಸಿಗೆ ಶ್ರಮಿಸಬೇಕಿದೆ ಎಂದರು. ಮುಖ್ಯವೈದ್ಯಾಧಿಕಾರಿ ಎಚ್.ಎಂ.ಮಲ್ಲನಗೌಡ್ರ, ಸಿಡಿಪಿಒ ಸುನಿತಾ ಪಾಟೀಲ, ಡಾ.ಸಂಗಮೇಶ, ಶಿವು ಶಿಂತ್ರಿ, ಎಸ್.ವಿ.ತುಪ್ಪದ, ಕ್ರುಸಾಬ್ ದೊಡಮನಿ ಇತರರಿದ್ದರು.