

ಯಳಂದೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಯರಗಂಬಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಾಜೇಶ್ ತಿಳಿಸಿದರು.
ತಾಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸಬೇಕು. ಮತದಾನ ದೇಶದ ಉತ್ತಮ ಭವಿಕ್ಕೆ ಬುನಾದಿ ಎಂದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ವರ್ಷ ಚುನಾವಣಾ ಆಯೋಗವು ಮನೆಯಿಂದಲೇ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಲ್ ಕಲೆಕ್ಟರ್ ಇಂದ್ರಾ, ಅಂಗನವಾಡಿ ಕಾರ್ಯಕರ್ತೆ ಸುಧಾ, ಪ್ರೇಮಾ, ಸಿಬ್ಬಂದಿ ರವಿ ಇದ್ದರು.