

ಕೊಳ್ಳೇಗಾಲ: ಪಟ್ಟಣದ ಭೀಮನಗರ ಬಡಾವಣೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಬಸವನಗುಡಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕಡೇ ಕಾರ್ತಿಕ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಸಂಜೆ ಪ್ರಧಾನ ಅರ್ಚಕರಾದ ಶಿವಮಲ್ಲು ಅವರ ನೇತೃತ್ವದಲ್ಲಿ ಶಿವ ಶರಣರ ಗದ್ದುಗೆ ಹಾಗೂ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳನ್ನು ಮಂಗಳವಾದ್ಯ ಸಮೇತ ನೆರವೇರಿಸಲಾಯಿತು. ಬಸವನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಸಲ್ಲಿಸಿ, ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ, ಮಂಗಳಾರತಿ ಹಾಗೂ ಪೊಂಗಲ್‌ಅನ್ನು ವಿತರಿಸಲಾಯಿತು. ನಂತರ ಹೂ, ಹೊಂಬಾಳೆ ಪುಷ್ಪಾಲಂಕೃತ ದೇವಾಯದ ನೂತನ ಬಸವನ ಮೆರವಣಿಗೆಯು ಭೀಮನಗರದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಅಂತೆಯೆ ಭೀಮನಗರದ ಶ್ರೀಸಿದ್ದಪ್ಪಾಜಿ ದೇವಸ್ಥಾನ ಹಾಗೂ ಆದಿಶಕ್ತಿ ಶ್ರೀಚೌಡಮ್ಮನ ಗುಡಿಯಲ್ಲಿ ಕಡೆ ಕಾರ್ತಿಕ ಹಿನ್ನೆಲೆ ವಿಶೇಷ ಪೂಜಾ ಪುನಸ್ಕಾರಗಳು ನೆರವೇರಿದವು. ನೂರಾರು ಭಕ್ತರು ದೇಗುಲಕ್ಕೆ ತೆರಳಿ ತೀರ್ಥ ಪ್ರಸಾದ ಪಡೆದುಕೊಂಡರು. ವಿಶೇಷ ಪೂಜೆ ಅಂಗವಾಗಿ ಮೂರು ದೇವಸ್ಥಾನಗಳನ್ನು ಹಸಿರು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.
ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ಕೆ.ಜೆ. ಜವರಪ್ಪ, ಎಂ. ಶಿವಸ್ವಾಮಿ, ಎಸ್. ರಾಜಶೇಖರಮೂರ್ತಿ, ಕೆ.ಕೆ. ಮೂರ್ತಿ, ಎಂ. ವರದರಾಜು, ಪ್ರಭುಸ್ವಾಮಿ, ಲಿಂಗರಾಜು, ನಗರಸಭಾ ಅಧ್ಯಕ್ಷೆ ಸಿ.ಎನ್. ರೇಖಾ ರಮೇಶ್, ಮಾಜಿ ಅಧ್ಯಕ್ಷ ಎಸ್. ರಮೇಶ್, ಸದಸ್ಯ ಎಸ್. ಮಂಜುನಾಥ್ ಸೇರಿದಂತೆ ಮುಖಂಡರಾದ ಪಾಪಣ್ಣ, ಎಸ್. ರಾಜಶೇಖರಮೂರ್ತಿ, ದೀಪಕ್, ಸಿ.ಬಾಬು, ಮಾರ್ಟೀನ್, ಪಶುಪತಿ, ಪ್ರದೀಪ್, ರಾಚಯ್ಯ, ಸಂತೋಷ್ ಸೇರಿ ಇತರರು ಇದ್ದರು.