

ಶಿವಮೊಗ್ಗ: ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟ ಎಂದು ಪರಿಗಣಿಸಲ್ಪಡುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕೇ? ಬೇಡವೇ? ಎನ್ನುವ ವಿಚಾರದಲ್ಲಿ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿ ಜೂ. 25ರಿಂದ ಪರೀಕ್ಷೆ ನಡೆಸಲು ಸಜ್ಜಾಗಿದ್ದು, ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ಹರಡದಂತೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಪ್ರತಿವರ್ಷ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಇಲಾಖೆ, ಈ ಬಾರಿ ಕರೊನಾ ಸೋಂಕು ಹರಡದಂತೆ ನೋಡಿಕೊಳ್ಳಲು ವಿಶೇಷ ಕಾಳಜಿ ವಹಿಸಿದೆ. ಹೈಕೋರ್ಟ್ಗೆ ನೀಡಿರುವ ಮಾಹಿತಿ ಅನುಸಾರ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷಿತ ಮಾರ್ಗಗಳನ್ನು ಅನುಸರಿಸುತ್ತಿದೆ.
ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಪರೀಕ್ಷೆ ಆರಂಭವಾಗುವ ವೇಳೆಗೆ ಯಾವುದಾದರೂ ಪರೀಕ್ಷಾ ಕೇಂದ್ರದ ಪ್ರದೇಶ ಕಂಟೇನ್ಮೆಂಟ್ ವಲಯ ಎಂದು ಘೊಷಣೆಯಾದರೆ ಆ ಕೇಂದ್ರದಲ್ಲಿ ಮಾತ್ರ ಪರೀಕ್ಷೆ ರದ್ದುಪಡಿಸಿ ಪೂರಕ ಪರೀಕ್ಷೆ ಸಂದರ್ಭದಲ್ಲಿ ಆ ಕೇಂದ್ರದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲಾಗುವುದು ಎಂದು ಡಿಡಿಪಿಐ ಎನ್.ಎಂ.ರಮೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕರೊನಾ ಭೀತಿ ಬೇಡ. ಎಲ್ಲಾ 84 ಪರೀಕ್ಷಾ ಕೇಂದ್ರಗಳನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳು ಕರೊನಾ ಮುಕ್ತ ಹಾಗೂ ಅತ್ಯಂತ ಸುರಕ್ಷಿತವಾಗಿವೆ. ಪ್ರತಿಯೊಬ್ಬರನ್ನೂ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ಮಾಸ್ಕ್ ನೀಡಲಾಗುವುದು.
313 ಸಿಬ್ಬಂದಿ ನಿಯೋಜನೆ: ಪರೀಕ್ಷಾ ಕಾರ್ಯಕ್ಕೆ 313 ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಸ್ಥಾನಿಕ ಜಾಗೃತ ದಳ. ಮೊಬೈಲ್ ಸ್ವಾಧೀನಾಧಿಕಾರಿ, ಮಾರ್ಗಾಧಿಕಾರಿಗಳು, ತಾಲೂಕು ನೋಡಲ್ ಅಧಿಕಾರಿಗಳು, ಶಾಲಾ ಕೋ-ಆರ್ಡಿನೇಟರ್ಗಳು, ಬ್ಲಾಕ್ ಕೇಂದ್ರದ ಉಪ ಮುಖ್ಯ ಅಧೀಕ್ಷಕರು ಸುಗಮ ಪರೀಕ್ಷೆ ನಡೆಸಲು ಸಜ್ಜಾಗಿದ್ದಾರೆ.
ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಹೊರತುಪಡಿಸಿ ಬೇರೆ ಯಾರೂ ಪರೀಕ್ಷಾ ಕೇಂದ್ರದೊಳಕ್ಕೆ ಮೊಬೈಲ್ಗಳನ್ನು ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಆಂಡ್ರಾಯ್್ಡ ಮೊಬೈಲ್ ಬಳಸುವಂತಿಲ್ಲ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಯನ್ನು ನಿಯೋಜಿಸಲಾಗಿದೆ. ಇವರು ಎಲ್ಲರ ಮೊಬೈಲ್ಗಳನ್ನು ತಮ್ಮ ಬಳಿ ಇಟ್ಟುಕೊಂಡು ಪರೀಕ್ಷೆ ಬಳಿಕ ಹಿಂದಿರುಗಿಸಲಿದ್ದಾರೆ ಎಂದು ಡಿಡಿಪಿಐ ತಿಳಿಸಿದರು.
ಇವರಿಗೆ ಮಾತ್ರ ಎನ್-95 ಮಾಸ್ಕ್: ಪ್ರತಿ ವಿದ್ಯಾರ್ಥಿಗೆ ಮೂರು ಮಾಸ್ಕ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಕಂಟೈನ್ಮೆಂಟ್ ವಲಯಗಳಿಂದ ಒಟ್ಟು 250 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇವರೆಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಎನ್-95 ಮಾಸ್ಕ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳು-12,287
ವಿದ್ಯಾರ್ಥಿನಿಯರು-11,956
ಒಟ್ಟು ಪರೀಕ್ಷಾರ್ಥಿಗಳು-24,243
ಪರೀಕ್ಷೆ ಮಿಸ್ ಆದ್ರೆ ಆತಂಕ ಬೇಡ: ತಾಂತ್ರಿಕ ಹಾಗೂ ಆರೋಗ್ಯ ಕಾರಣದಿಂದ ಜೂನ್ 25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದರೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಹಾಗೂ ಅವರೆಲ್ಲರನ್ನೂ ಪ್ರಥಮ ಬಾರಿಗೆ ಪರೀಕ್ಷೆ ಎದುರಿಸುತ್ತಿರುವವರು ಎಂದೇ ಪರಿಗಣಿಸಲಾಗುವುದು ಎಂದು ಡಿಡಿಪಿಐ ರಮೇಶ್ ಮಾಹಿತಿ ನೀಡಿದರು.
ಕಂಟೈನ್ಮೆಂಟ್ ವಲಯದಲ್ಲಿ ಪರೀಕ್ಷಾ ಕೇಂದ್ರಗಳಿಲ್ಲ. ಒಂದು ವೇಳೆ ಪರೀಕ್ಷೆ ಸಂದರ್ಭದಲ್ಲಿ ಯಾವುದಾದರೂ ಪರೀಕ್ಷಾ ಕೇಂದ್ರ ಇರುವ ಪ್ರದೇಶ ಕಂಟೈನ್ಮೆಂಟ್ ವಲಯ ಎಂದು ಘೊಷಣೆಯಾದರೆ ಪರೀಕ್ಷೆ ಸ್ಥಗಿತಗೊಳಿಸಿ ಪೂರಕ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆ ನಡೆಸಲಾಗುವುದು. ಒಂದೆರಡು ವಿಷಯದ ಪರೀಕ್ಷೆ ಬಳಿಕ ವಿದ್ಯಾರ್ಥಿ ಅನಾರೋಗ್ಯಕ್ಕೆ ತುತ್ತಾದರೆ ಪೂರಕ ಪರೀಕ್ಷೆಯಲ್ಲಿ ಉಳಿದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
736 ಇನ್, 631 ಔಟ್: ಹೊರ ಜಿಲ್ಲೆಗಳ 736 ವಿದ್ಯಾರ್ಥಿಗಳು ಈ ಬಾರಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಜಿಲ್ಲೆಯ 631 ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿದ್ದು, ಅಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. ಫಲಿತಾಂಶ ಮಾತ್ರ ಅವರು ವ್ಯಾಸಂಗ ಮಾಡಿದ ಶಾಲೆಗಳಲ್ಲೇ ಪ್ರಕಟಗೊಳ್ಳಲಿದೆ ಎಂದು ಡಿಡಿಪಿಐ ಹೇಳಿದರು.
ಪರೀಕ್ಷಾ ಕೇಂದ್ರ-ವಿದ್ಯಾರ್ಥಿಗಳ ವಿವರ
ತಾಲೂಕು ಪರೀಕ್ಷಾ ಕೇಂದ್ರ ಶಾಲೆಗಳು ವಿದ್ಯಾರ್ಥಿಗಳು
ಭದ್ರಾವತಿ 15 87 4,607
ಹೊಸನಗರ 05 37 1,629
ಸಾಗರ 10 50 2,878
ಶಿಕಾರಿಪುರ 11 73 3,697
ಶಿವಮೊಗ್ಗ 26 132 7,164
ಸೊರಬ 10 42 2,578
ತೀರ್ಥಹಳ್ಳಿ 07 41 1,690
ಒಟ್ಟು 84 462 24,243
200 ವಿದ್ಯಾರ್ಥಿಗಳಿಗೆ ಒಂದು ತಪಾಸಣೆ ಕೇಂದ್ರ: ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲು 30 ಸೆಕೆಂಡ್ ಬೇಕು ಎಂಬುದು ಆರೋಗ್ಯ ಇಲಾಖೆ ಲೆಕ್ಕಾಚಾರ. ಹೀಗಾಗಿ ಪ್ರತಿ 200 ವಿದ್ಯಾರ್ಥಿಗಳಿಗೆ ಒಂದು ತಪಾಸಣಾ ಕೇಂದ್ರ ತೆರೆಯಲಾಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ಅಗತ್ಯ ಥರ್ಮಲ್ ಸ್ಕ್ರೀನಿಂಗ್ ಉಪಕರಣ ಸಂಗ್ರಹ ಮಾಡಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕಾಯಿಸಿ ಆರಿಸಿದ ಕುಡಿಯುವ ನೀರನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತೆ ಸೂಚನೆ ನೀಡಲಾಗಿದೆ.
200 ಮಾರ್ಗಗಳು: ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆಯಿಲ್ಲದ ವಿದ್ಯಾರ್ಥಿಗಳಿಗೆ ಒಟ್ಟು 200 ಮಾರ್ಗಗಳನ್ನು ಗುರುತಿಸಲಾಗಿದೆ. 138 ಖಾಸಗಿ ಶಾಲಾ ಬಸ್ಗಳು ಹಾಗೂ 104 ಕೆಎಸ್ಆರ್ಟಿ ಬಸ್ಗಳು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬಳಿಕ ಸ್ವಂತ ಊರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್ಗಳಲ್ಲೇ ಉಳಿಯುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಪರೀಕ್ಷೆ ಕೇಂದ್ರಕ್ಕೆ ಬರುವವರ ವಿವರ
ಕಾಲ್ನಡಿಗೆಯಲ್ಲಿ ಬರುವವರು-3,745
ಪಾಲಕರ ವಾಹನದಲ್ಲಿ-10,940
ಶಾಲಾ ವಾಹನದಲ್ಲಿ-548
ನಿತ್ಯದ ಬಸ್ಗಳಲ್ಲಿ-752
ಹಾಸ್ಟೆಲ್ನಲ್ಲಿ ಇರುವವರು-586
ಇಲಾಖೆ ಬಸ್ಗಳಲ್ಲಿ-4,097