

ಕಡೂರು: ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಕಡೂರು-ಮಲ್ಲೇಶ್ವರ ರಸ್ತೆಯನ್ನು ಜೋಡಿ ರಸ್ತೆಯಾಗಿ ಮಾರ್ಪಡಿಸುವ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಮರವಂಜಿ ರಸ್ತೆಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಏಳು ಕಿ.ಮೀ. ಮರುಡಾಂಬರೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಮರವಂಜಿ ರಸ್ತೆಯನ್ನು 8 ವರ್ಷದ ಹಿಂದೆ ನೂತನವಾಗಿ ನಿರ್ಮಿಸಲಾಗಿತ್ತು. ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2ನೇ ಹಂತದಲ್ಲಿ ಉಳಿದ ರಸ್ತೆಗೂ ಮರುಡಾಂಬರೀಕರಣ ಮಾಡಲಾಗುತ್ತದೆ. ಮರವಂಜಿ ರಸ್ತೆಯಿಂದ ಮಲ್ಲೇಶ್ವರತನಕ ಜೋಡಿ ರಸ್ತೆಯನ್ನಾಗಿಸಲು ಪುರಸಭೆಯೊಂದಿಗೆ ಚರ್ಚಿಸಿ ಶೀಘ್ರ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದಲ್ಲಿ ದಿನೇದಿನೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಕಡೂರು ಪುರಸಭೆಯನ್ನು ನಗರಸಭೆಯನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮಲ್ಲೇಶ್ವರ ಭಾಗದ ಪ್ರದೇಶಗಳು ಪುರಸಭೆ ವ್ಯಾಪ್ತಿಗೆ ಒಳಪಡುವುದರಿಂದ ರಸ್ತೆ ಅಭಿವೃದ್ಧಿಗೆ ಶಾಸಕರು ಚುರುಕುನೀಡಿದ್ದಾರೆ ಎಂದರು.
ಪುರಸಭೆ ಸದಸ್ಯ ಈರಳ್ಳಿ ರಮೇಶ್, ಮಲ್ಲೇಶ್ವರ ಗ್ರಾಪಂ ಅಧ್ಯಕ್ಷೆ ಯಶೋದಾ ಧರ್ಮಣ್ಣ, ಮಾಜಿ ಅಧ್ಯಕ್ಷ ವಸಂತಕುಮಾರ್, ಅಬಿದ್ ಪಾಷಾ, ಮುಬಾರಕ್ ಇತರರಿದ್ದರು.