

ಕಡೂರು: ಪುರಸಭೆ ಸದಸ್ಯರು ಒಮ್ಮತದಿಂದ ಚರ್ಚಿಸಿದರೆ ಅಭಿವೃದ್ಧಿಗೆ ಸಹಕಾರವಾಗುತ್ತದೆ. ನಾವೆಲ್ಲರೂ ಸಾರ್ವಜನಿಕರ ಪರವಾಗಿ ಅಭಿವೃದ್ಧಿ ಮಾಡಲು ಬಂದಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತೋಟದಮನೆ ಮೋಹನ್ ಮಾತನಾಡಿ, 1ನೇ ವಾರ್ಡ್‌ನಲ್ಲಿ ಡಕ್ ನಿರ್ಮಾಣಕ್ಕೆ ಸೂಚಿಸಿದರೂ ಕೆಲಸವಾಗಿಲ್ಲ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಕೆಲವು ಸದಸ್ಯರು ಅವರವರ ವಾರ್ಡ್‌ನಲ್ಲಿ ಕೇಳಿಕೊಂಡಿರುವ ಕೆಲಸಗಳನ್ನು ಮಾಡಿಸಲಾಗಿದೆ ಎಂದರು.
5 ಕೋಟಿ ರೂ.ಗೆ ಜಿಲ್ಲಾಧಿಕಾರಿ ಕ್ರಿಯಾಯೋಜನೆ ತಯಾರಿಸಿ ಕಳುಹಿಸಲು ಸೂಚಿಸಿದ್ದು, ಅದರಂತೆ ಎಲ್ಲ ಸದಸ್ಯರಿಗೂ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿ ನಿಮ್ಮ ವಾರ್ಡ್‌ಗಳಲ್ಲಿನ ಕೆಲಸಗಳ ಮಾಹಿತಿ ನೀಡಲು ತಿಳಿಸಿದ್ದೆವು. ಅನುದಾನ ಬಂದ ನಂತರ ಕಾಮಗಾರಿ ನಡೆಸಲಾಗುತ್ತದೆ. ಇದರಲ್ಲಿ ಗೊಂದಲ ಬೇಡ. 5 ಕೋಟಿ ಹಣ ನೀಡಲು ಶಾಸಕರು ಶಿಫಾರಸ್ಸು ಮಾಡಿದ್ದರೆ ಎಂದರು.
ಇ-ಖಾತಾ ಅಭಿಯಾನ ಮಾಡಲು ಸದಸ್ಯರು ಸಹಕಾರ ನೀಡಬೇಕು. ಇದರಿಂದ ಪುರಸಭೆಗೆ ಆದಾಯ ಹೆಚ್ಚಲಿದ್ದು, ಕಂದಾಯ ಕಟ್ಟಲು ಎಲ್ಲರೂ ಒಳಪಡುತ್ತಾರೆ. 15,163 ಖಾತೆದಾರರಿದ್ದು 8,948 ಇ-ಸ್ವತ್ತು ಪಡೆದಿದ್ದಾರೆ. ಉಳಿದವರನ್ನು ಹುಡುಕಿ ಮಾಡಿಸುವುದೇ ಇ-ಖಾತಾ ಅಭಿಯಾನ ಎಂದರು.
ಮನೆ ಕಂದಾಯ, ಉದ್ದಿಮೆ ಪರವಾನಗಿ, ನೀರಿನ ಕಂದಾಯ ಏರಿಕೆ ಮಾಡಲು ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಕಾರಂಜಿ ನಿರ್ಮಿಸಲು, ರಾಜೀವ್ ಗಾಂಧಿ ಬಡಾವಣೆಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ, ಕೊಳಚೆ ಪ್ರದೇಶದ ಸರ್ಕಾರಿ ಶಾಲೆ ದತ್ತು ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ವಚ್ಛ ಭಾರತ್ 2.0 ಯೋಜನೆಯಡಿ ಉದ್ಯಾನಗಳ ಅಭಿವೃದ್ಧಿ, ಪೌರಕಾರ್ಮಿಕರಿಗೆ ವಸತಿ ವಿಷಯ, ಸದಸ್ಯರು ವಾರ್ಡ್‌ಗಳ ಕಾಮಗಾರಿ ಮಾಡಲು ನೀಡಿರುವ ಬೇಡಿಕೆಗಳನ್ನು ಸಭೆಯ ಗಮನಕ್ಕೆ ತರಲಾಯಿತು. ಹಂತ ಹಂತವಾಗಿ ಕಾಮಗಾರಿಗಳನ್ನು ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.
ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಮಂಜುನಾಥ್, ಈರಳ್ಳಿ ರಮೇಶ್, ತೋಟದಮನೆ ಮೋಹನ್, ಶ್ರೀಕಾಂತ್, ಯಾಸೀನ್, ಇಕ್ಬಾಲ್, ಸೋಮಣ್ಣ, ಮರುಗುದ್ದಿ ಮನು, ಗೋವಿಂದರಾಜ್, ಯತೀಶ್, ಸುಧಾ, ಪದ್ಮಾ ಇತರರಿದ್ದರು.