ಕಡಿಮೆ ಮತದಾನ ಮತಗಟ್ಟೆಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಭೇಟಿ

mm (6)
Published on

ಮೈಸೂರು: ವಿಧಾನಸಭೆ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.


ನಗರದ ಬನ್ನಿಮಂಟಪ ಹುಡ್ಕೊ, ಜ್ಯೋತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೇಸ್ ಕಾಲೇಜಿಗೆ ಭೇಟಿ ನೀಡಿದರು. ನಂತರ ಮೈಸೂರು ತಾಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲಿಗರ ಕಾಲನಿಗೆ ಭೇಟಿ ನೀಡಿದರು. ಅಲ್ಲಿಯ ಮತಗಟ್ಟೆಯಲ್ಲಿ ರ‌್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಕರ್ಯ, ಶೌಚಗೃಹ, ಕಟ್ಟಡದ ಸುಸ್ಥಿತಿ ಸೇರಿದಂತೆ ವಿವಿಧ ಮೂಲ ಸೌಕರ್ಯ ಪರಿಶೀಲಿಸಿದರು.


2018ರ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಹೆಚ್ಚಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸ್ವೀಪ್ ಚಟುವಟಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಮತದಾರರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.


ಸೋಲಿಗರ ಕಾಲನಿಯ ನಿವಾಸಿಗಳ ಜತೆಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಚುನಾವಣೆಯ ಮತದಾನದ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕ ಮಾಡಬೇಕು. 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಸಹಾಯಕ ನಿರ್ದೇಶಕ ವಿಶ್ವನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್, ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್, ಪಿಡಿಒ ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net