

ತುಮಕೂರು: ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಕೆರೆಗಳಿಗೆ ನೀರು ಹಂಚಿಕೆ ಕುರಿತು ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಜತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಮಹತ್ವದ ಸಭೆ ನಡೆಸಿದರು.
ಜಿಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕರಾದ ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್, ಜಿ.ಬಿ.ಜ್ಯೋತಿಗಣೇಶ್, ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಡಾ.ರಾಜೇಶ್‌ಗೌಡ ಭಾಗವಹಿಸಿ, ತಮ್ಮ ಕ್ಷೇತ್ರಗಳಲ್ಲಿ ಕೆರೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಲಭ್ಯವಿರುವ ಮೂರು ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಜಿಲ್ಲೆಯ ಶೇ.50 ಕೆರೆಗಳು ತುಂಬಲಿವೆ. ಕೆರೆಗಳಿಗೆ ಶೇ.50 ನೀರು ತುಂಬಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಪಾಲಿನ ಹೇಮಾವತಿ ನೀರು ದಾಖಲೆಯಲ್ಲಿ ಹರಿದಿದ್ದರೂ 3ಟಿಎಂಸಿ ನೀರು ಪೋಲಾಗಿದೆ ಎಂದರು.
ಹೇಮಾವತಿಯಿಂದ ಹಂಚಿಕೆಯಾದ ನೀರು ಬಹುತೇಕ ಕೆರೆಗಳಲ್ಲಿ ತಳದಲ್ಲಿಯೂ ನಿಲ್ಲುವುದಿಲ್ಲ, ಹೆಸರಿಗೆ ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಮಾರ್ಪಡಿಸಬೇಕು. ಕಡಿಮೆ ಹಂಚಿಕೆಯಾದ ಅಥವಾ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಯ ನಾಲೆಗಳಿಗೆ ಸಮೀಪದ ಕೆರೆಗಳನ್ನು ಈ ಯೋಜನೆಗಳಿಂದಲೇ ತುಂಬಿಸಲಾಗುವುದು. ಇಂತಹ ಕೆರೆಗಳಿಗೆ ನಿಗದಿಯಾದ ನೀರನ್ನು ಕಡಿಮೆ ಹಂಚಿಕೆಯಾದ ಕೆರೆಗಳಿಗೆ ಹರಿಸುವ ಯೋಜನೆ ಸಿದ್ಧಪಡಿಸಬೇಕು ಎಂದು ಹೇಮಾವತಿ ಅಧಿಕಾರಿಗೆ ಸೂಚಿಸಿದರು.
ನೀರಾವರಿ ಯೋಜನೆಯ ಭೂ ಸ್ವಾಧೀನಕ್ಕಾಗಿ ರೈತರಿಗೆ ಪರಿಹಾರ ಶೀಘ್ರ ತಲುಪಿಸುವ ವ್ಯವಸ್ಥೆಯಾಗಬೇಕು, 2013ರ ಕಾಯ್ದೆ ಅಂತೆ ಭೂಸ್ವಾಧೀನಾ ಕಾಯ್ದೆಗೆ ಹಣ ಮೀಸಲಿಡಬೇಕು ಎಂದು ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌ಗೆ ಸೂಚಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ನೀರಾವರಿ ಹಿತದೃಷ್ಟಿಯಿಂದ ಈ ಯೋಜನೆ ಉತ್ತಮವಾಗಿದ್ದು, ನೀರಿನ ಹಂಚಿಕೆ ಬಗ್ಗೆಯೂ ತೃಪ್ತಿಯಿದೆ, ಕಡಬ ಕೆರೆಗೆ ನೀರು ಹರಿಯುವ ನಾಲೆ ಒತ್ತುವರಿ ತೆರವುಗೊಳಿಸಿದರೆ ಪೋಲಾಗುತ್ತಿರುವ ನೀರು ಉಳಿಸಬಹುದು, ಹಾಗಲವಾಡಿ ಕೆರೆಗೆ ನೀರು ಹರಿಸಲು 4 ಕಿಮೀ ನಾಲೆ ಅಗತ್ಯವಿದ್ದು ಪೈಪ್‌ಲೈನ್ ಮಾಡಿಕೊಡಬೇಕು ಎಂದರು.
ಪಾವಗಡ ಶಾಸಕ ವೆಂಕಟರಮಣಪ್ಪ ಮಾತನಾಡಿ, ಬರಪೀಡಿತ ಪಾವಗಡ ತಾಲೂಕಿಗೆ ಕಡಿಮೆ ನೀರಿನ ಹಂಚಿಕೆ ಇದ್ದು, ಬೇರೆ ನೀರಾವರಿ ನೀರಿನ ಮೂಲಗಳು ಇಲ್ಲ. ಹಾಗಾಗಿ ಪಾವಗಡ ತಾಲೂಕಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಶಿರಾ ಶಾಸಕ ಡಾ.ರಾಜೇಶ್ ಗೌಡ ಮಾತನಾಡಿ, ವಿಶೇಷ ಕಾರಣದಿಂದಾಗಿ ಮದಲೂರು ಕೆರೆಗೆ ನೀರು ಹರಿದಿದ್ದು, ಭದ್ರ ಮೇಲ್ದಂಡೆ ಯೋಜನೆ ಮೂಲಕ ಕಳ್ಳಂಬೆಳ್ಳ, ತರೂರು, ಬ್ರಹ್ಮಸಂದ್ರದ ಕೆರೆಗಳಿಗೆ ನೀರು ಹರಿಸಲಾಗುವುದು. 20 ಕಿಲೋ ಮೀಟರ್ ಒಳಗೆ 12 ಚೆಕ್ ಡ್ಯಾಂಗಳಿವೆ. ಆದ್ದರಿಂದ ಹೇಮಾವತಿಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಗ್ರಾಮಾಂತರ ಕ್ಷೇತ್ರದ 11 ಕೆರೆಗಳಿಗೆ ನೀರು ಹರಿಸಿರುವುದಕ್ಕೆ ಅಭಿನಂದನೆ. ವೃಷಭಾವತಿ ನೀರನ್ನು ತಾಲೂಕಿನ ಇನ್ನಷ್ಟು ಕೆರೆಗಳಿಗೆ ಹರಿಸಬೇಕು, ಗೂಳೂರು ಹಾಗೂ ಬೆಳ್ಳಾವಿ ಕೆರೆಗಳಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮೂರು ನೀರಾವರಿ ಯೋಜನೆಗಳ ಫಲವಾಗಿ 111 ಕೆರೆಗಳಿಗೆ ನೀರು ಹರಿಸಲು ನಡೆಸಿರುವ ಚಿಂತನೆಗೆ ಧನ್ಯವಾದ. ಹೇಮೆ, ಎತ್ತಿನಹೊಳೆ ಹೊರತು ಪಡಿಸಿದರೆ ಬೇರೆ ನೀರಿನ ಮೂಲಗಳಿಲ್ಲ. ಆದ್ದರಿಂದ ಇನ್ನಷ್ಟು ಕೆರೆಗಳನ್ನು ತುಂಬಿಸುವಂತೆ ಕೇಳಿಕೊಂಡರು. ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ, ಸಣ್ಣ ನೀರಾವರಿ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳಾದ ಪೇಶ್ವೆ, ಮಹಾದೇವ ಮತ್ತಿತರರು ಇದ್ದರು.
ಮದುವೆ ಮತ್ತಿತರರ ಸಂಭ್ರಮಾಚರಣೆಗೆ ಕಡಿವಾಣ ಅನಿವಾರ್ಯ: ತುಮಕೂರು ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಹತೋಟಿ ತುರ್ತು ಅಗತ್ಯವಿದ್ದು, ಜಿಲ್ಲೆಯೆಲ್ಲೆಡೆ ಮದುವೆ ಮತ್ತಿತರರ ಸಂಭ್ರಮಾಚರಣೆಗೆ ಕಡಿವಾಣ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಕರೊನಾ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಮಾಡುವ ಪರಿಸ್ಥಿತಿಯಲ್ಲಿ ಸರ್ಕಾರಗಳಿಲ್ಲ. ಹಾಗಾಗಿ, ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಸಭೆ, ಸಮಾರಂಭ, ಆರ್ಕೆಸ್ಟ್ರಾ ಹಾಗೂ ಜಾತ್ರೆಗಳ ಆಚರಣೆ ಹಾಗೂ ಸಂತೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆದೇಶ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
200 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶ ನೀಡಿ, ಹತ್ತಿರದವರಷ್ಟೇ ಭಾಗವಹಿಸಿ ಮದುವೆ ಮಾಡಿಕೊಳ್ಳಬೇಕು, ನಿಯಮ ಮೀರಿ ಅದ್ದೂರಿ ಮದುವೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಕರೊನಾ ನಿಯಂತ್ರಣದ ಸಲುವಾಗಿ, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಏ.1ರಿಂದ ಜಿಲ್ಲೆಯಲ್ಲಿ ಕಡ್ಡಾಯವಾಗಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಿ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
144 ಜಾರಿಗೆ ಸೂಚನೆ: ಜಿಲ್ಲೆಯಲ್ಲಿ ಕಲಂ 144 ಜಾರಿ ಮಾಡಿದ್ದು, ಸಭೆ, ಸಮಾರಂಭ, ಜಾತ್ರೆ, ಆರ್ಕೆಸ್ಟ್ರಾ, ಮದುವೆ, ನಾಟಕಗಳಲ್ಲಿ ಹೆಚ್ಚಿನ ಜನ ಸೇರಬಾರದೆಂಬ ಕಾರಣಕ್ಕೆ ಜಾರಿ ಮಾಡಲಾಗಿದೆ. ಇದರಲ್ಲಿ ಕ್ರಿಮಿನಲ್ ಪ್ರಕರಣ ಒಳಪಡುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.