

ಹಾಸನ: ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ (ಎಂಐಎಸ್) ಧಾರಣೆ ಕುಸಿದಿರುವ ಶುಂಠಿ ಖರೀದಿಸಲು ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಆ ಪ್ರಕ್ರಿಯೆ ಆರಂಭ ಅಗುವವರೆಗೂ ಬೆಳೆಗಾರರು ಕಡಿಮೆ ಬೆಲೆಗೆ ಶುಂಠಿ ಮಾರಾಟ ಮಾಡಬಾರದು ಎಂದು ಬೆಳೆಗಾರರ ಸಂಘದ ಪದಾಧಿಕಾರಿ ಶ್ರೀನಿವಾಸ್ ಜಾವಗಲ್ ಮನವಿ ಮಾಡಿದರು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಶುಂಠಿ ಧಾರಣೆ ಕೆಜಿಗೆ 10 ರೂ.ಗೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.70 ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷದ ಉತ್ಪಾದನೆಗಿಂತ ಪ್ರಸಕ್ತ ಸಾಲಿನಲ್ಲಿ ಶೇ.10ರಷ್ಟು ಅಧಿಕ ಉತ್ಪಾದನೆ ಅಥವಾ ಶೇ.10ರಷ್ಟು ಕುಸಿತ ಕಂಡರೆ ಸದರಿ ಬೆಳೆಯನ್ನು ಎಂಐಎಸ್ ಯೋಜನೆಯಡಿ ಬೆಂಬಲ ಬೆಲೆ ನಿಗದಿ ಪಡಿಸಲು ಅವಕಾಶ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾವು ಕಳೆದ ಜ.28 ರಂದು ಡಿಸಿ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೆವು. ಇದೇ ರೀತಿ ರಾಜ್ಯದ 20 ಜಿಲ್ಲೆಗಳಲ್ಲೂ ಮನವಿ ಸಲ್ಲಿಸಲಾಗಿತ್ತು. ಅವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಸಿದ್ದರು. ಅದರಂತೆ ನಾವು ಹಾಗೂ ರಾಜ್ಯದ ವಿವಿಧೆಡೆ ಬೆಳೆದಿರುವ ಹಸಿ ಶುಂಠಿಗೆ ಕೆಜಿಗೆ 42,90 ರೂ. (ಕ್ವಿಂಟಾಲ್‌ಗೆ 4,290 ರೂ.) ನೀಡಲು ಕರ್ನಾಟಕ ಕೃಷಿ ಬೆಲೆ ಆಯೋಗದ ನಿರ್ದೇಶನದಂತೆ ಶಿಫಾರಸು ಮಾಡಿದೆ. ಕೇಂದ್ರ ಸಹ ರಾಜ್ಯಕ್ಕೆ ಸಲಹೆ ಸೂಚನೆ ನೀಡಿದೆ. ಆದ್ದರಿಂದ ಕೆಲವೇ ದಿನಗಳಲ್ಲಿ ಖರೀದಿ ಕೇಂದ್ರ ತೆರೆದು ಶುಂಠಿ ಕೊಂಡುಕೊಳ್ಳಲಾಗುತ್ತದೆ. ಹಾಗಾಗಿ ಎಲ್ಲ ರೈತರೂ ತಮ್ಮ ಬಳಿ ಇರುವ ಶುಂಠಿಯನ್ನು ಮಾರಾಟ ಮಾಡಬಾರದು.ಬೆಂಬಲ ಬೆಲೆಯಡಿ ಶುಂಠಿ ಖರೀದಿಯಾದರೆ ಸಣ್ಣ ಬೆಳೆಗಾರರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು. ’
ಸುದ್ದಿಗೋಷ್ಠಿ ಸಂಘದ ಪದಾಧಿಕಾರಿಗಳಾದ ಭೂಮೇಶ್, ದರ್ಶನ್, ಪುನೀತ್, ರಾಕೇಶ್ ಇದ್ದರು.