

ಹಾಸನ: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಿ ಮತ್ತು ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ಚುನಾವಣೆ ಕಳೆದ 45 ದಿನಗಳ ಕಾಲ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಬಾರದು ಎಂದು ಯಾವುದೇ ಸುದ್ದಿಗೋಷ್ಠಿ ಮಾಡಿರಲಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ಕೂಡ ಪ್ರತಿದಿನ ಬೆಳಗ್ಗೆ ಅಕ್ಕಿ ವಿಚಾರದಲ್ಲಿ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತಿದ್ದೆವು. ಅದೇ ರೀತಿ ರೈತರು, ಆಸ್ಪತ್ರೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೆವು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಯಾವೆಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಲಿದೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.
200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿ ಇದೀಗ ಷರತ್ತುಗಳನ್ನು ವಿಧಿಸಿದ್ದಾರೆ. ಅಲ್ಲದೇ ವಿದ್ಯುತ್ ದರ ಹೆಚ್ಚು ಮಾಡಿರುವುದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಮನೆಗೂ ಕೂಡ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದೆ. ನಮ್ಮ ಮನೆಗೆ 14 ಸಾವಿರ ರೂ. ವಿದ್ಯುತ್ ಬಿಲ್ ಮೊದಲು ಬರುತ್ತಿತ್ತು. ಈಗ 34 ಸಾವಿರ ರೂ. ಬಿಲ್ ಬಂದಿದೆ. ಹಾಸನ ಸಂಸದರ ನಿವಾಸಕ್ಕೆ ಈ ಮೊದಲು 8 ಸಾವಿರ ರೂ. ಬಿಲ್ ಬರುತ್ತಿತ್ತು. ಈಗ 24 ಸಾವಿರ ರೂ. ಬಿಲ್ ಬಂದಿದೆ. ಹೀಗಾದರೆ ವಿದ್ಯುತ್ ಬಿಲ್ ಕಟ್ಟುವುದು ಹೇಗೆ? ನಾನು ಕೂಡ ಇಂಧನ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಒಂದು ದಿನವೂ ಕೂಡ ದರ ಹೆಚ್ಚಳ ಮಾಡಿಲ್ಲ. ಜನರಿಗೆ ಸಮಸ್ಯೆ ಆಗದಂತೆ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಐದು ವರ್ಷ ಕಾಂಗ್ರೆಸ್ ಪಕ್ಷವೇ ಆಡಳಿತ ಮಾಡಲಿ. ಅದರ ಜತೆಗೆ ನಮ್ಮ ಜಿಲ್ಲೆಯನ್ನು ಕೂಡ ಅಭಿವೃದ್ಧಿ ಮಾಡಲಿ. ನಾನು ಎಂದು ಕೂಡ ರಾಜಕಾರಣ ಮಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ನಮ್ಮ ಪಕ್ಷ ಸೋತಿದೆ ಎಂದು ಮನೆಯಲ್ಲಿ ಕೂರುವುದಿಲ್ಲ. ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂದರು.
ಚುನಾವಣೆಯಲ್ಲಿ ನಾನು ಕಡಿಮೆ ಅಂತರದಿಂದ ಗೆದ್ದು ಮನೆ ಸೇರಿಕೊಂಡಿದ್ದಾರೆ ಎಂದುಕೊಂಡಿದ್ದರೆ ಅದು ಭ್ರಮೆ. ನಾನು ಕೂಡ ಸೋಲು- ಗೆಲುವುಗಳನ್ನು ಕಂಡಿದ್ದೇನೆ. ಜನರು ನನ್ನ ಮೇಲೆ ಪ್ರೀತಿ ಇಟ್ಟು ಗೆಲ್ಲಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಇದ್ದರು.
ತುಮಕೂರಿಗೆ ನೀರು ಬಿಟ್ಟಂತೆ ನಮ್ಮ ರೈತರಿಗೂ ಬಿಡಿ
ಹೇಮಾವತಿ ಜಲಾಶಯದಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಆದರೂ ಕೂಡ ತುಮಕೂರಿಗೆ ನೀರು ಬಿಡಲಾಗಿದೆ. ಅಲ್ಲಿರುವವರು ಕೂಡ ರೈತರೇ, ಅದೇ ರೀತಿ ನಮಗೂ ಹಾಗೂ ಮಂಡ್ಯ ಜಿಲ್ಲೆಗೂ ನೀರು ಬಿಡಲಿ ಎಂದು ಎಚ್.ಡಿ. ರೇವಣ್ಣ ಒತ್ತಾಯಿಸಿದರು.
ತುಮಕೂರಿಗೆ ನೀರು ಬಿಟ್ಟಿರುವುದಕ್ಕೆ ನಮ್ಮದೇನು ತಕರಾರು ಇಲ್ಲ. ಅದೇ ರೀತಿ ಹಾಸನ, ಮಂಡ್ಯ, ಕೆಆರ್ ನಗರಕ್ಕೂ ಕೂಡ ನೀರು ಬಿಡಬೇಕು. ಸಚಿವರು ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಿ ಸಲಹೆ ಸೂಚನೆಯನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಕೇವಲ ಅಧಿಕಾರಿಗಳು ಮತ್ತು ಇಂಜಿನಿಯರ್ ಕೇಳಿ ನೀರು ಬಿಟ್ಟಿದ್ದಾರೆ. ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.
ಯಾರಿಂದಲೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ.
ಎರಡು ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ದೇವೇಗೌಡರು ಮತ್ತು ಕುಮಾರಸ್ವಾಮಿಯನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಅದು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂದು ಎಚ್‌ಡಿಆರ್ ಕಿಡಿಕಾರಿದರು.
ಕಳೆದ ಚುನಾವಣೆಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿಕೊಂಡು ಎರಡು ರಾಷ್ಟ್ರೀಯ ಪಕ್ಷಗಳು ಕೂಡ ಬಹಳ ಪ್ರಯತ್ನ ನಡೆಸಿದವು. ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಡ್ಯ, ತುಮಕೂರಿಗೆ ಕರೆದುಕೊಂಡು ಬಂದು ರೋಡ್ ಶೋ ಮಾಡಿದ್ದರು. ಅದೇ ರೀತಿ ಕಾಂಗ್ರೆಸ್‌ನವರು ನಮ್ಮ ಮೇಲೆ ಟೀಕೆ-ಟಿಪ್ಪಣಿಗಳನ್ನು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ವಿಚಾರವಾಗಿ ನನಗೇನು ಗೊತ್ತಿಲ್ಲ. ಪ್ರಾದೇಶಿಕ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ಕೊನೆಗೆ ಅವರಿಬ್ಬರೂ ಹೊಂದಾಣಿಕೆ ರಾಜಕಾರಣ ಮಾಡಲು ಮುಂದಾಗುತ್ತಾರೆ ಎಂದು ಆರೋಪಿಸಿದರು.
ಕೆಂಪೇಗೌಡ ಜಯಂತಿ ಗೈರಿಗೆ ರೇವಣ್ಣ ಸ್ಪಷ್ಟನೆ
ಕೆಂಪೇಗೌಡರ ಜಯಂತಿಯನ್ನು ಹೊಳೆನರಸಿಪುರ ಮತ್ತು ಹಾಸನದಲ್ಲಿ ಒಂದೇ ಸಮಯದಲ್ಲಿ ಹಮ್ಮಿಕೊಂಡಿದ್ದರಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ರೇವಣ್ಣ ಸ್ಪಷ್ಟಪಡಿಸಿದರು.
ಸಂಸದರು ಮೆರವಣಿಗೆಗೆ ಚಾಲನೆ ಕೊಟ್ಟ ನಂತರ ಒಂದೇ ಮಾತರಂ ರೈಲು ಉದ್ಘಾಟನೆಗೆ ತೆರಳಿದರು. ಸಚಿವರು ಪೂರ್ವಭಾವಿ ಸಭೆಗಳಿಗೆ ನಮ್ಮನ್ನು ಕರೆದಿದ್ದರೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದೆವು. ಆದರೆ ಕರೆದಿರಲಿಲ್ಲ. ಮುಂದಕ್ಕೆ ಪ್ರಗತಿ ಪರಿಶೀಲನೆ ಸಭೆಗೆ ಕರೆದರೆ ಭಾಗವಹಿಸುತ್ತೇನೆ ಎಂದು ಹೇಳಿದರು.